ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ದೇಶದ್ರೋಹ ಪ್ರಕರಣಕ್ಕೆ ಒತ್ತಾಯ : ಹರೀಶ್ ಕುಮಾರ್
ಗಾಂಧಿ ಬಗ್ಗೆ ಅವಹೇಳನ ಆರೋಪ

ಮಂಗಳೂರು, ಫೆ. 4: ಮಹಾತ್ಮಗಾಂಧಿ ಬಗ್ಗೆ ಸಂಸದ ಅನಂತ ಕುಮಾರ್ ಹೆಗಡೆ ನೀಡಿರುವ ಅವಹೇಳನಕಾರಿ ಹೇಳಿಕೆ ಬಗ್ಗೆ ದೇಶದ್ರೋಹದ ಪ್ರಕರಣ ದಾಖಲಿಸುವ ಜತೆಗೆ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭಾರತದಲ್ಲಿ ಗಾಂಧಿಗಿಂತ ಮೇರು ವ್ಯಕ್ತಿ ಇನ್ನೊಬ್ಬರಿಲ್ಲ. ಆದರೆ ಗೋಡ್ಸೆಯನ್ನು ಹೊಗಳುವಂತಹ ವಿವಾದಿತ ವ್ಯಕ್ತಿಗೆ ಸಂಸತ್ ಪ್ರವೇಶಕ್ಕೆ ಅವಕಾಶ ನೀಡಿರುವುದೇ ರಾಜಕೀಯ ದುರಂತ ಎಂದರು.
ಅವರ ಮಾತುಗಳಲ್ಲಿಯೇ ಅವರಿಗೆ ಗಾಂಧಿ ಬಗ್ಗೆ ಯಾವುದೇ ಗೌರವ ಇಲ್ಲದಿರುವುದು ತಿಳಿಯುತ್ತದೆ. ಹಾಗಿರುವಾಗ ಸರಕಾರ ಅವರದ್ದೇ ಇದೆ. ಅವರು ತಮ್ಮ ಜಿಲ್ಲೆಯಲ್ಲಿರುವ ಭವನಗಳು, ಸ್ಮಾರಕಗಳನ್ನು ನಿಷೇಧ ಮಾಡಿಸುವ ಧೈರ್ಯ ತೋರಿಸಲಿ. ಗಾಂಧಿ ಬಗ್ಗೆ ಅವಮಾನವನ್ನು ದೇಶಭಕ್ತರು ಸಹಿಸಲು ಸಾಧ್ಯವಿಲ್ಲ ಹರೀಶ್ ಕುಮಾರ್ ಹೇಳಿದರು.
ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪಕ್ಷ ನೋಟೀಸು ಜಾರಿಗೊಳಿಸಿರುವ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರೀಶ್ ಕುಮಾರ್, ಪಕ್ಷದ ಕ್ರಮದ ಬಗ್ಗೆ ವಿಶ್ವಾಸವಿಲ್ಲ. ತಮ್ಮ ಸದಸ್ಯರನ್ನು ಇಂತಹ ಹೇಳಿಕೆಗೆ ಪಕ್ಷವೇ ಛೂ ಬಿಡುವ ಅನುಮಾನವಿದೆ. ಅನಂತ ಕುಮಾರ್ ಹೆಗಡೆ ಇಂತಹ ಹೇಳಿಕೆಗಳನ್ನು ನೀಡುವುದು ಇದೇ ಮೊದಲಲ್ಲ. ಮೊದಲೇ ಲಗಾಮು ಹಾಕಿದ್ದರೆ ದೇಶ, ಸಂವಿಧಾನದ ಬಗ್ಗೆ ಅವರಿಗೆ ಅರಿವಿರುತ್ತಿತ್ತು ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಶಾಹುಲ್ ಹಮೀದ್, ಟಿ.ಕೆ. ಸುಧೀರ್, ಸಿ.ಎಂ.ಮುಸ್ತಫಾ, ಶುಭೋದಯ ಆಳ್ವ, ಪಥ್ವಿರಾಜ್, ನೀರಜ್ ಪಾಲ್ ಉಪಸ್ಥಿತರಿದ್ದರು.







