ಬ್ರಾಹ್ಮಣ್ಯದ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ: ವಾಮನ್ ಮೇಶ್ರಾಮ್
ಸಿಎಎ ವಿರೋಧಿಸಿ ಪರಿವರ್ತನಾ ಯಾತ್ರೆ

ಉಡುಪಿ, ಫೆ. 4: ಈ ದೇಶವನ್ನು ಆಳಿದ ಬ್ರಿಟೀಷರಂತೆ ಬ್ರಾಹ್ಮಣರು ಕೂಡ ವಿದೇಶಿಯರಾಗಿದ್ದಾರೆ. ಬ್ರಿಟೀಷರನ್ನು ದೇಶದಿಂದ ಓಡಿಸಲು ಗಾಂಧೀಜಿ ಮಾಡಿರುವಂತೆ ಈ ದೇಶದ ಮೂಲ ನಿವಾಸಿಗಳಾದ ನಾವು ಕೂಡ ಬ್ರಾಹ್ಮಣ್ಯ ವನ್ನು ಓಡಿಸಲು ಕ್ವಿಟ್ ಇಂಡಿಯಾ ಚಳವಳಿಯನ್ನು ನಡೆಸಬೇಕಾಗುತ್ತದೆ ಎಂದು ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೇಶ್ರಾಮ್ ಹೇಳಿದ್ದಾರೆ.
ಬಹುಜನ ಕ್ರಾಂತಿ ಮೋರ್ಚಾದ ವತಿಯಿಂದ ಸಿಎಎ ಷಡ್ಯಂತ್ರ ವಿರೋಧಿಸಿ, ಇವಿಎಂ ರಹಸ್ಯ ಹಗರಣ ಬಯಲು, ಡಿಎನ್‌ಎ ಆಧಾರಿತ ಎನ್‌ಆರ್‌ಸಿ ಜಾರಿಗೆ ಆಗ್ರಹಿಸಿ ಅಜ್ಜರಕಾಡು ಪುರಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಪರಿವರ್ತನಾ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕೇವಲ ತೋರಿಕೆಗೆ ಮಾತ್ರ. ಪರದೆ ಹಿಂದೆ ಆರ್‌ಎಸ್‌ಎಸ್ ಹಾಗೂ ಬ್ರಾಹ್ಮಣರು ಎಲ್ಲ ವನ್ನು ನಿಯಂತ್ರಿಸುತ್ತಿದ್ದಾರೆ. ಈ ಮೂಲಕ ಇವರು ಭಾರತದಲ್ಲಿ ಬ್ರಾಹ್ಮಣ ರಾಜ್ಯ ಸ್ಥಾಪನೆಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎಲ್ಲಕ್ಕಿಂತ ಬಹಳ ದೊಡ್ಡ ಸಾಕ್ಷಿ ಡಿಎನ್‌ಎ ಹೊರತು ಕಾಗದ ಪತ್ರ ಅಲ್ಲ. ಡಿಎನ್‌ಎ ಜನರ ದೇಹದಲ್ಲಿರುತ್ತದೆ. ಕಾಗದ ಇಲ್ಲದಿದ್ದರೆ ನಮ್ಮಲ್ಲಿ ಡಿಎನ್‌ಎ ಇದೆ. ನಾವು ಡಿಎನ್‌ಎ ಪರೀಕ್ಷೆಗೆ ಸಿದ್ಧ ಇದ್ದೇವೆ. ತಿವಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ಡಿಎನ್‌ಎಗೆ ಮಾನ್ಯತೆ ನೀಡಿದೆ. ಹಾಗಾಗಿ ಕಾಗದ ಪತ್ರದ ಬದಲು ಡಿಎನ್‌ಎ ಮೂಲಕ ಭಾರತೀಯತೆಯನ್ನು ದೃಢಪಡಿಸಬೇಕು. ಆದರೆ ಇದಕ್ಕೆ ಬ್ರಾಹ್ಮಣರು ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು.
ಸಿಎಎ ಕಾನೂನನ್ನು ಪಾಕಿಸ್ತಾನದ ಹೆಸರಿನಲ್ಲಿ ರಚಿಸಲಾಗಿದೆ. ಪಾಕಿಸ್ತಾನದಲ್ಲಿ ಮುಸ್ಲಿಮರೇತರಿಗೆ ಮಾತ್ರ ಅನ್ಯಾಯ ಆಗುತ್ತಿದೆ ಎಂಬುದು ಮೋದಿಯ ಸುಳ್ಳು ಹೇಳಿಕೆಯಾಗಿದೆ. ಅಲ್ಲಿ ಮುಸ್ಲಿಮರ ಮೇಲೂ ಅನ್ಯಾಯ ಆಗುತ್ತಿದೆ. ಆದರೆ ಈ ಕಾಯ್ದೆಯಲ್ಲಿ ಮುಸ್ಲಿಮರನ್ನೇ ಕೈ ಬಿಡಲಾಗಿದೆ. ಆದುದರಿಂದ ಇದು ಸಂವಿಧಾನ ವಿರೋಧಿ ಕಾನೂನು ಆಗಿದೆ ಎಂದು ಅವರು ದೂರಿದರು.
ರಾಷ್ಟ್ರೀಯ ಮುಸ್ಲಿಮ್ ಮೋರ್ಚಾದ ಅಧ್ಯಕ್ಷ ಮೌಲಾನ ಅಬ್ದುಲ್ ಅಝ್ಹಾರಿ ಮಾತನಾಡಿ, ಇಂದು ಜೈಲಿನಲ್ಲಿ ಇರಬೇಕಾದ ಅಪರಾಧಿಗಳು ಅಧಿಕಾರದಲ್ಲಿದ್ದಾ ರೆ, ನಿರಾಪರಾಧಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ನಡೆಸಿ ಅವರನ್ನು ಸೋಲಿಸಬೇಕಾದ ಅಗತ್ಯ ಇದೆ. ಈ ಜನ್ಮವಲ್ಲ, ಇನ್ನೂ ಏಳು ಜನ್ಮಗಳು ಕಳೆದರೂ ಈ ಕರಾಳ ಕಾಯ್ದೆಯನ್ನು ಜಾರಿಗೆ ತರಲು ನಾವು ಬಿಡುವುದಿಲ್ಲ. ಈ ದೇಶವನ್ನು ವಿಭಜನೆ ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದರು.
ರಾಷ್ಟ್ರೀಯ ಮೂಲನಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ನಿಶಾ ಮೆಶ್ರಾಮ್ ಮಾತನಾಡಿ, ಸಿಎಎ, ಎನ್‌ಆರ್‌ಸಿ, ಎಂಪಿಆರ್ ಅಣು ಬಾಂಬ್ ಗಿಂತಲೂ ಅಪಾಯಕಾರಿಯಾಗಿದ್ದು, ಇದನ್ನು ನಿಷ್ಕ್ರೀಯಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ಪೌರತ್ವ ಸಾಬೀತು ಪಡಿಸಲು ನಾವು ಕಾಗದ ಪತ್ರ ಅಲ್ಲ, ನಮ್ಮ ರಕ್ತ ಕೊಡಲು ಸಿದ್ಧರಿದ್ದೇವೆ. ಆ ರಕ್ತದ ಡಿಎನ್‌ಎ ಪರೀಕ್ಷೆ ಮೂಲಕ ಪೌರತ್ವವನ್ನು ಸಾಬೀತು ಪಡಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಕಾಸ್ ಚೌಧರಿ ಪಟೇಲ್ ಮಾತನಾಡಿ, ಎಸ್‌ಸಿಎಸ್‌ಟಿ, ಹಿಂದುಳಿದ ವರ್ಗದವರು ಹಿಂದುಗಳಲ್ಲ. ಶೂದ್ರರನ್ನು ಬ್ರಾಹ್ಮಣರು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಮುಸ್ಲಿಮರೊಂದಿಗೆ ಜಗಳ ಮಾಡಲು ಇವರಿಗೆ ಶೂದ್ರರು ಬೇಕು. ಆದರೆ ಅಧಿಕಾರ ವನ್ನು ಬ್ರಾಹ್ಮಣರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯ ಅತಿಥಿಗಳಾಗಿ ಭಾರತ್ ಮುಕ್ತಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಲಾಸ್ ಖರಾತ್, ದಸಂಸ ಭೀಮಘರ್ಜನೆ ಬಹುಜನ ಮುಕ್ತಿ ಮೋರ್ಚಾದ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ನ್ಯಾಶನಲ್ ವುಮೆನ್ಸ್ ಫ್ರಂಟ್‌ನ ನಸೀಮಾ ಫಾತಿಮಾ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಯಾಸೀನ್ ಮಲ್ಪೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ಕುಂದಾಪುರ ಅಧ್ಯಕ್ಷ ಮೌಲಾನ ಅಬ್ದುಲ್ ಬಾಸಿತ್ ನದ್ವಿ ಉಪಸ್ಥಿತರಿದ್ದರು.
ದಸಂಸ ಭೀಮ ಘರ್ಜನೆ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು ಸ್ವಾಗತಿಸಿದರು. ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ಕರ್ನಾಟಕ ಅಧ್ಯಕ್ಷ ತೌಫೀಕ್ ಪಾರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಝೀರ್ ಬೆಳವಾಯಿ ವಂದಿಸಿದರು. ಇಸಾಖ್ ಹೂಡೆ ಹಾಗೂ ಸುಬಾನ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು.
'ಇವಿಎಂ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಳ ತಾಯಿ'
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆಗಳು ಅಪಾಯಕಾರಿ ಎಂಬುದಾಗಿ ನಾವೆಲ್ಲ ಭಾವಿಸಿದ್ದೇವೆ. ಆದರೆ ಇವುಗಳ ತಾಯಿ ಇವಿಎಂ ಯಂತ್ರ ಆಗಿದೆ. 2011ರಲ್ಲಿ ಸುಪ್ರೀಂ ಕೋರ್ಟ್ ಕೂಡ ಇವಿಎಂ ವಿರೋಧ ಮಾಡಿ ನಿರ್ಣಯ ಮಾಡಿದೆ. ಇವಿಎಂ ಯಂತ್ರದಿಂದ ಮುಕ್ತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ವಾಮನ್ ಮೇಶ್ರಾಮ್ ತಿಳಿಸಿದರು.
ಇವಿಎಂ ಬರುವ ಮೊದಲು ಈ ದೇಶದ ಎಲ್ಲೂ ಕೂಡ ಬಿಜೆಪಿ ಬಹುಮತ ಗಳಿಸಿರಲಿಲ್ಲ. ನರೇಂದ್ರ ಮೋದಿಗಿಂತ ದೊಡ್ಡ ನಾಯಕರಾಗಿದ್ದ ವಾಜಪೇಯಿ, ಅಡ್ವಾಣಿ ಅವರು ಕೂಡ 182ಕ್ಕಿಂತ ಹೆಚ್ಚು ಸೀಟು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಇವರಷ್ಟು ದೊಡ್ಡ ನಾಯಕರಲ್ಲದ ಮೋದಿ ಹೇಗೆ ಇಷ್ಟು ಪ್ರಮಾಣದ ಸೀಟುಗಳನ್ನು ಗೆದ್ದರು ಎಂಬುದು ಪ್ರಶ್ನೆ. ಇದರ ರಹಸ್ಯ ಇವಿಎಂ ಯಂತ್ರ ಆಗಿದೆ ಎಂದು ಅವರು ದೂರಿದರು.









