ಬಿಲ್ ಪಡೆಯುವಂತೆ ಗ್ರಾಹಕರನ್ನು ಉತ್ತೇಜಿಸಲು ಜಿಎಸ್‌ಟಿ ಲಾಟರಿ ಯೋಜನೆಗೆ ಸರಕಾರದ ಚಿಂತನೆ

ಹೊಸದಿಲ್ಲಿ,ಫೆ.4: ಗ್ರಾಹಕರು ತಾವು ಖರೀದಿಸಿದ ಸರಕುಗಳಿಗೆ ಬಿಲ್‌ಗಳನ್ನು ಪಡೆಯುವಂತೆ ಉತ್ತೇಜಿಸಲು ಜಿಎಸ್‌ಟಿಯಡಿ 10 ಲ.ರೂ.ನಿಂದ ಒಂದು ಕೋ.ರೂ.ವರೆಗೆ ಬಹುಮಾನಗಳಿರುವ ಲಾಟರಿ ಯೋಜನೆಯೊಂದನ್ನು ತರಲು ಸರಕಾರವು ಚಿಂತನೆ ನಡೆಸಿದೆ.
ಜಿಎಸ್‌ಟಿಯಡಿ ಪ್ರತಿಯೊಂದೂ ಬಿಲ್ ಗ್ರಾಹಕರಿಗೆ ಲಾಟರಿಯನ್ನು ಗೆಲ್ಲುವ ಅವಕಾಶವನ್ನು ಒದಗಿಸಲಿದೆ ಮತ್ತು ಇದು ಅವರು ತೆರಿಗೆಯನ್ನು ಪಾವತಿಸುವಂತೆ ಪ್ರೋತ್ಸಾಹಕ ಕ್ರಮವಾಗಲಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾಶುಲ್ಕ ಮಂಡಳಿಯ ಸದಸ್ಯ ಜಾನ್ ಜೋಸೆಫ್ ಅವರು ಇಲ್ಲಿ ಅಸೋಚಾಮ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಿಳಿಸಿದರು.
ಉದ್ದೇಶಿತ ಯೋಜನೆಯಂತೆ ಖರೀದಿ ಬಿಲ್ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಸ್ವಯಂಚಾಲಿತವಾಗಿ ಡ್ರಾ ನಡೆಯಲಿದೆ ಮತ್ತು ವಿಜೇತರಿಗೆ ಮಾಹಿತಿಯನ್ನು ನೀಡಲಾಗುವುದು ಎಂದರು.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ಮತ್ತು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಜಿಎಸ್‌ಟಿ ಮಂಡಳಿಯು ಪ್ರಸ್ತಾಪಿತ ಲಾಟರಿ ಯೋಜನೆಯನ್ನು ಪರಿಶೀಲಿಸಲಿದೆ. ಲಾಟರಿಗೆ ಬಿಲ್‌ನ ಕನಿಷ್ಠ ಮೊತ್ತವನ್ನು ನಿಗದಿಗೊಳಿಸಬೇಕೇ ಎನ್ನುವುದನ್ನೂ ಮಂಡಳಿಯು ನಿರ್ಧರಿಸಲಿದೆ.
ಲಾಟರಿ ಬಹುಮಾನಗಳನ್ನು ನೀಡಲು ಬಳಕೆದಾರರ ಕಲ್ಯಾಣ ನಿಧಿಯಿಂದ ಹಣವನ್ನು ಬಳಸಿಕೊಳ್ಳಲಾಗುವುದು. ಜಿಎಸ್‌ಟಿ ಆದಾಯದಲ್ಲಿ ಸೋರಿಕೆಯನ್ನು ತಡೆಯಲು ಲಾಟರಿ ಯೋಜನೆ ಮತ್ತು ಕ್ಯೂಆರ್ ಬಾರ್‌ಕೋಡ್ ಆಧಾರಿತ ವಹಿವಾಟುಗಳಿಗೆ ಉತ್ತೇಜನ ಸೇರಿದಂತೆ ವಿವಿಧ ಪರ್ಯಾಯಗಳ ಬಗ್ಗೆ ಸರಕಾರವು ಪರಿಶೀಲಿಸುತ್ತಿದೆ.







