ಸಚಿವ ಸ್ಥಾನಕ್ಕೆ ಮೂಲ ಬಿಜೆಪಿ ಶಾಸಕರ ಪಟ್ಟು

ಬೆಂಗಳೂರು, ಫೆ.4: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ತಮಗೂ ಸಚಿವ ಸ್ಥಾನ ನೀಡಬೇಕೆಂದು ಮೂಲ ಬಿಜೆಪಿ ಶಾಸಕರು ಪಟ್ಟು ಹಿಡಿದಿದ್ದಾರೆ.
ಮಂಗಳವಾರ ಇಲ್ಲಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ಸಚಿವ ಸಂಪುಟ ಸೇರಲು ನಾವು ಕೂಡ ಆಕಾಂಕ್ಷಿ. ಸಚಿವ ಸ್ಥಾನದ ಅಪೇಕ್ಷೆ ಎಲ್ಲರಿಗೂ ಇರುವಂತೆ ನನಗೂ ಇದೆ ಎಂದರು.
ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ, ಅದಕ್ಕಾಗಿ ಒತ್ತಾಯ ಮಾಡುವುದಿಲ್ಲ. ಮುಖ್ಯಮಂತ್ರಿ ಅವರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಆದರೆ ಅವಕಾಶ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗೆಲುವು ಸಾಧಿಸಿದ 11 ಶಾಸಕರಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಕೈಬಿಡುವುದು ಒಳ್ಳೆಯದಲ್ಲ. ಕುಮಟಳ್ಳಿಗೆ ಇದರಿಂದ ಬೇಸರವಾಗಬಹುದು ಎಂದ ಅವರು, ಗೆದ್ದ ಉಳಿದವರನ್ನು ಸಚಿವರನ್ನಾಗಿ ಮಾಡಿ ಇವರೊಬ್ಬರನ್ನು ಕೈಬಿಡುವುದು ಸರಿಯಲ್ಲ ಎಂದರು.
ಶಾಸಕ ನೆಹರು ಓಲೇಕಾರ್ ಮಾತನಾಡಿ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ದೊರೆತರೆ ಸಂತೋಷ. ಇಲ್ಲದಿದ್ದರೆ ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿಕೊಂಡಿರುತ್ತೇನೆ ಎಂದು ನುಡಿದರು.
ಟ್ವಿಟ್ ಮೂಲಕ ಬೇಸರ: ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನಾದರೂ ನನ್ನ ಕ್ಷೇತ್ರ ಹಾಗೂ ನಮ್ಮಂಥವರನ್ನು ಬೆಳೆಸಿರಿ. ಈಗಾಗಲೇ ಸಾಕಷ್ಟು ಬಾರಿ ಸರಕಾರದಲ್ಲಿ ಅಧಿಕಾರ ಅನುಭವಿಸಿದವರು ಇದ್ದಾರೆ. ಅವರು ತಾವು ಪಡೆದ ಸ್ಥಾನಮಾನ ತ್ಯಜಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಪಕ್ಷದ ಮುಖಂಡರು ಇತ್ತ ಆಸಕ್ತಿ ತೋರದಿರುವುದು ಮತ್ತೊಂದೆಡೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ನಾಯಕರು ಯಾವುದೇ ಆಸಕ್ತಿ ತೋರಿಸದಿರುವುದು ಬೇಸರ, ಇನ್ನುಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮಕ್ಕಳ ಸಮೇತ ಭೇಟಿ’
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಹಿಂದೆ ಸರಿದಿದ್ದ ಮಾಜಿ ಶಾಸಕ ಆರ್.ಶಂಕರ್ ಮಕ್ಕಳ ಸಮೇತ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ತಮಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ನೀವು ಹೇಳಿದ್ದಕ್ಕೆ ನಾನು ಮಂತ್ರಿ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಮಗೆ ಅನ್ಯಾಯ ಮಾಡಬೇಡಿ. ಗುರುವಾರ ವಿಸ್ತರಣೆಯಾಗಲಿರುವ ಸಂಪುಟಕ್ಕೆ ನಮ್ಮನ್ನು ಪರಿಗಣಿಸಬೇಕೆಂದು ಶಂಕರ್ ಮನವಿ ಸಲ್ಲಿಸಿದರು ಎನ್ನಲಾಗಿದೆ.







