ಶಾಹೀನ್ಬಾಗ್ ಪ್ರತಿಭಟನಾಕಾರರ ತೆರವಿಗೆ ಕೋರಿ ಅರ್ಜಿಯ ತುರ್ತು ವಿಚಾರಣೆಗೆ ಆಗ್ರಹ

ಫೈಲ್ ಚಿತ್ರ
ಹೊಸದಿಲ್ಲಿ,ಫೆ.4: ದಿಲ್ಲಿಯ ಶಾಹೀನ್ಬಾಗ್ ಪ್ರದೇಶದಲ್ಲಿಯ ರಸ್ತೆಯನ್ನು ಆಕ್ರಮಿಸಿಕೊಂಡಿರುವ ನೂರಾರು ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸುವಂತೆ ಕೋರಿ ತಾನು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಯನ್ನು ನಡೆಸುವಂತೆ ಬಿಜೆಪಿ ನಾಯಕ ನಂದಕಿಶೋರ ಗರ್ಗ್ ಅವರು ಮಂಗಳವಾರ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು. ಶೀಘ್ರವೇ ವಿಚಾರಣೆಗೆ ದಿನಾಂಕವನ್ನು ಪಡೆದುಕೊಳ್ಳಲು ನ್ಯಾಯಾಲಯದ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸುವಂತೆ ಪೀಠವು ಅವರಿಗೆ ಸೂಚಿಸಿತು.
ದಿಲ್ಲಿ ಮತ್ತು ನೊಯ್ಡವನ್ನು ಸಂಪರ್ಕಿಸುವ ರಸ್ತೆಯಲ್ಲಿ ಸುಮಾರು ಎರಡು ತಿಂಗಳುಗಳಿಂದಲೂ ಧರಣಿ ಪ್ರತಿಭಟನೆ ನಡೆಯುತ್ತಿರುವುದರಿಂದ ಪ್ರದೇಶದ ನಿವಾಸಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ದಿಲ್ಲಿಯ ವಿವಿಧ ಮುಖ್ಯರಸ್ತೆಗಳಲ್ಲಿಯೂ ಪ್ರತಿಭಟನೆಯಿಂದಾಗಿ ಸಂಚಾರ ದಟ್ಟಣೆಯುಂಟಾಗಿದೆ ಎಂದು ಗರ್ಗ್ ಅರ್ಜಿಯಲ್ಲಿ ಹೇಳಿದ್ದಾರೆ.
ಕಾನೂನು ಜಾರಿ ವ್ಯವಸ್ಥೆಯು ಪ್ರತಿಭಟನಾಕಾರರ ತಾಳಕ್ಕೆ ತಕ್ಕಂತೆ ಕುಣಿಯುವಂತಾಗಿದೆ ಎಂದಿರುವ ಅರ್ಜಿಯು,ಸಾರ್ವಜನಿಕ ಸ್ಥಳದಲ್ಲಿ ಅಡ್ಡಿಗಳನ್ನುಂಟು ಮಾಡುವ ಪ್ರತಿಭಟನೆಗಳಿಗೆ ಮಾರ್ಗಸೂಚಿಯನ್ನು ನಿಗದಿಗೊಳಿಸುವಂತೆ ನ್ಯಾಯಾಲಯವನ್ನು ಕೋರಿಕೊಂಡಿದೆ.
ಶಾಹೀನ್ಬಾಗ್ ಪ್ರತಿಭಟನೆಯು ಸಂವಿಧಾನದ ವ್ಯಾಪ್ತಿಯಲ್ಲಿದೆ ಎನ್ನುವುದರಲ್ಲಿ ಸಂಶಯವಿಲ್ಲ,ಆದರೆ ಸಾಂವಿಧಾನಿಕ ರಕ್ಷಣೆಗಳ ರಾಜಾರೋಷ ಉಲ್ಲಂಘನೆಗಳಿಂದಾಗಿ ಅದು ತನ್ನ ಸಿಂಧುತ್ವವನ್ನು ಕಳೆದುಕೊಂಡಿದೆ ಎಂದು ಗರ್ಗ್ ಅರ್ಜಿಯಲ್ಲಿ ವಾದಿಸಿದ್ದಾರೆ.







