ಮೆಸ್ಕಾಂನಿಂದ ಯೂನಿಟ್‌ಗೆ 62ಪೈಸೆ ದರ ಏರಿಕೆಗೆ ಪ್ರಸ್ತಾವನೆ: ಉಡುಪಿ ಜಿಲ್ಲಾ ಭಾ.ಕಿ.ಸಂ.ನಿಂದ ತೀವ್ರ ಆಕ್ಷೇಪ
ಉಡುಪಿ, ಫೆ.4: ಪ್ರತಿ ವರ್ಷದಂತೆ ಈ ವರ್ಷವೂ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (ಮೆಸ್ಕಾಂ) ಪ್ರತಿ ಯೂನಿಟ್‌ಗೆ ಸರಾಸರಿ 62 ಪೈಸೆ ದರ ಏರಿಕೆಗೆ ಮುಂದಾಗಿದೆ. ಈ ಬಗ್ಗೆ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ, ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದರ ವಿರುದ್ಧ ಸಾರ್ವಜನಿಕರಿಗೆ ಆಕ್ಷೇಪ ಸಲ್ಲಿಸಲು ಇದ್ದ ಒಂದು ತಿಂಗಳ ಕಾಲಾವಕಾಶ ಇಂದಿಗೆ ಮುಗಿದಿದ್ದು, ಭಾರತೀಯ ಕಿಸಾನ್ ಸಂಘ ದಿಂದ ಸುಮಾರು 50 ಪ್ರಮುಖ ಪದಾಧಿಕಾರಿಗಳಿಂದ ಆಕ್ಷೇಪವನ್ನು ಸಲ್ಲಿಸಲಾಗಿದೆ. ಫೆ. 13ರಂದು ಮಂಗಳೂರಿನಲ್ಲಿ ನಡೆಯುವ ಸಾರ್ವಜನಿಕ ವಿಚಾರಣೆ ಸಂದರ್ಭದಲ್ಲಿ ಸಂಘದ ಪರವಾಗಿ, ಸಮರ್ಪಕವಾಗಿ ವಾದವನ್ನು ಮಂಡಿಸಿ, ಮೆಸ್ಕಾಂನ ದರ ಏರಿಕೆ ಪ್ರಸ್ತಾವನೆಯನ್ನು ಆಯೋಗ ತಿರಸ್ಕರಿಸುವಂತೆ ಮಾಡಲು ಸಂಘ ತೀರ್ಮಾನಿಸಿದೆ ಎಂದು ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 7 ವರ್ಷಗಳಿಂದ ನಿರಂತರವಾಗಿ ಲಾಭದಲ್ಲಿರುವ ಮೆಸ್ಕಾಂ, ಪ್ರಸ್ತುತ ದರದಂತೆ ವಿದ್ಯುತ್ ಸರಬರಾಜನ್ನು ಮಾಡಿದರೆ 2020-21ಕ್ಕೆ ಸುಮಾರು 346.09 ಕೋಟಿ ರೂ. ನಷ್ಟವಾಗುತ್ತದೆ ಎಂಬ ಅಂದಾಜು ಲೆಕ್ಕಾಚಾರವನ್ನು ನೀಡಿ ಎಲ್.ಟಿ. ವರ್ಗದ ಗ್ರಾಹಕರಿಗೆ ಪ್ರತಿ ಕಿಲೋ ವ್ಯಾಟ್‌ಗೆ ನಿಗದಿತ ಶುಲ್ಕವನ್ನು ರೂ. 30ರಿಂದ 40ರವರೆಗೆ ಹಾಗೂ ಎಚ್.ಟಿ. ವರ್ಗದವರಿಗೆ ರೂ. 50ರಿಂದ 200ರವರೆಗೆ ಏರಿಸಲು ಮೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೇ ಯೂನಿಟ್ ದರವನ್ನು ಎಲ್.ಟಿ. ಮತ್ತು ಎಚ್.ಟಿ. ವರ್ಗಕ್ಕೆ ಪ್ರತಿ ಯೂನಿಟ್‌ಗೆ 20ರಿಂದ 57 ಪೈಸೆಯವರೆಗೆ ಏರಿಸಲು ಪ್ರಸ್ತಾವನೆಯನ್ನು ಸಲ್ಲಿಸಿದೆ.
ಮೆಸ್ಕಾಂನ ಅಡಿಟ್ ವರದಿಯಂತೆ 2013ರಲ್ಲಿ 12.60 ಕೋಟಿ ರೂ., 2014ರಲ್ಲಿ 20.17 ಲಕ್ಷ, 2015ರಲ್ಲಿ 13.92 ಕೋಟಿ, 2016ರಲ್ಲಿ 11.12 ಕೋಟಿ, 2017ರಲ್ಲಿ 12.94 ಕೋಟಿ, 2018ರಲ್ಲಿ 31.42 ಕೋಟಿ ಹಾಗೂ 2019ರಲ್ಲಿ ರೂ. 56.39 ಕೋಟಿ ಲಾಭ ಗಳಿಸಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ಹಂಚಿಕೆ ನಷ್ಟವನ್ನು ಹೊಂದಿದ್ದರೂ ಪುನಃ ದರ ಏರಿಕೆಯ ಪ್ರಸ್ತಾವನೆ ಯನ್ನು ಸಲ್ಲಿಸಿದೆ ಎಂದು ಭಾಕಿಸಂ ಆಕ್ಷೇಪಿಸಿದೆ.
ಮೆಸ್ಕಾಂಗೆ ಸರಕಾರದ ಸಬ್ಸಿಡಿ ಹಾಗೂ ಇತರ ಕಂಪೆನಿಗಳ ಬಾಕಿ ಎಲ್ಲಾ ಸೇರಿ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಬರಲು ಬಾಕಿಯಿದೆ. ರಾಜ್ಯದ ಇತರ ಕಂಪೆನಿಗಳಿಗಿಂತ ಮೆಸ್ಕಾಂಗೆ ದುಬಾರಿ ದರದ ವಿದ್ಯುತ್ತನ್ನು ಹಂಚಿಕೆ ಮಾಡಲಾಗುತ್ತಿದೆ. ಮಂಜೂರಾದ ನೌಕರರ ಪ್ರಮಾಣಕ್ಕಿಂತ ಅರ್ಧ ಸಾಮರ್ಥ್ಯದಲ್ಲಿ ಕೆಲಸ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಮೆಸ್ಕಾಂ ಒದ್ದಾಡುವಂತಾಗಿದೆ. ಹೀಗಿದ್ದೂ ಗುಣಮಟ್ಟ ಹಾಗೂ ಗ್ರಾಹಕರ ಸೇವೆಯಲ್ಲಿ ಸುಧಾರಣೆ ಮಾಡದೇ ಪ್ರತಿ ವರ್ಷ ದರ ಏರಿಕೆಗೆ ಆಯೋಗದ ಮುಂದೆ ಅರ್ಜಿ ಸಲ್ಲಿಸುವ ಮೆಸ್ಕಾಂನ ಕ್ರಮ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುವಂತದ್ದು.
ಕಳೆದ 7 ವರ್ಷದಿಂದ ಲಾಭದಲ್ಲಿರುವ ಮೆಸ್ಕಾಂ ಈ ಬಾರಿ ದರ ಇಳಿಕೆಗೆ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಈ ಎಲ್ಲಾ ವಿಚಾರವನ್ನು ಆಯೋಗದ ಮುಂದೆ ಪ್ರಸ್ತಾವಿಸಿ ದರ ಇಳಿಕೆಗೆ ಆದೇಶ ನೀಡುವಂತೆ ಜಿಲ್ಲಾ ಭಾ.ಕಿ.ಸಂ. ಪ್ರಯತ್ನಿಸಲಿದೆ ಎಂದು ಸತ್ಯನಾರಾಯಣ ಉಡುಪ ಜಪ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







