‘ಲವ್ ಜಿಹಾದ್’ನ್ನು ವ್ಯಾಖ್ಯಾನಿಸಿಲ್ಲ,ಯಾವುದೇ ಕೇಂದ್ರ ಏಜೆನ್ಸಿಯಿಂದ ಪ್ರಕರಣ ವರದಿಯಾಗಿಲ್ಲ : ಕೇಂದ್ರ ಸರಕಾರ

ಹೊಸದಿಲ್ಲಿ,ಫೆ.4: ಹಾಲಿ ಕಾನೂನುಗಳಡಿ ‘ಲವ್ ಜಿಹಾದ್’ ಅನ್ನು ವ್ಯಾಖ್ಯಾನಿಸಲಾಗಿಲ್ಲ ಮತ್ತು ಯಾವುದೇ ಕೇಂದ್ರೀಯ ಸಂಸ್ಥೆಯಿಂದ ಪ್ರಕರಣ ವರದಿಯಾಗಿಲ್ಲ ಎಂದು ಸರಕಾರವು ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದ್ದು, ತನ್ಮೂಲಕ ಇದೇ ಮೊದಲ ಬಾರಿಗೆ ‘ಲವ್ ಜಿಹಾದ್’ನಿಂದ ಅಧಿಕೃತವಾಗಿ ಅಂತರವನ್ನು ಕಾಯ್ದುಕೊಂಡಿದೆ.
‘ಲವ್ ಜಿಹಾದ್’ ಮುಸ್ಲಿಮ್ ಪುರುಷರು ಮತ್ತು ಹಿಂದು ಮಹಿಳೆಯರ ನಡುವಿನ ಸಂಬಂಧಗಳನ್ನು ಗುರಿಯಾಗಿಸಿಕೊಂಡು ಬಲಪಂಥೀಯ ಗುಂಪುಗಳು ಬಳಸುತ್ತಿರುವ ಶಬ್ದವಾಗಿದೆ. ಇದು ಮಹಿಳೆಯರನ್ನು ಬಲವಂತದಿಂದ ಮತಾಂತರಗೊಳಿಸುವ ವ್ಯಾಪಕ ಸಂಚು ಆಗಿದೆ ಎನ್ನುವುದು ಅವುಗಳ ವಾದವಾಗಿದೆ.
ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಹಾಯಕ ಗೃಹಸಚಿವ ಜಿ.ಕಿಶನ್ ರೆಡ್ಡಿ ಅವರು ಸಂವಿಧಾನದ ವಿಧಿ 25ನ್ನು ಉಲ್ಲೇಖಿಸಿ,ಸಾರ್ವಜನಿಕ ಸುವ್ಯವಸ್ಥೆ,ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಯಾವುದೇ ಧರ್ಮದಲ್ಲಿ ಶ್ರದ್ಧೆಯನ್ನು ಹೊಂದಿರಲು,ಅನುಸರಿಸಲು ಮತ್ತು ಪ್ರಸಾರ ಮಾಡಲು ಈ ವಿಧಿಯು ಸ್ವಾತಂತ್ರವನ್ನು ಒದಗಿಸಿದೆ. ‘ಲವ್ ಜಿಹಾದ್’ನ್ನು ಹಾಲಿ ಕಾನೂನುಗಳಡಿ ವ್ಯಾಖ್ಯಾನಿಸಲಾಗಿಲ್ಲ ಮತ್ತು ಯಾವುದೇ ಕೇಂದ್ರೀಯ ಸಂಸ್ಥೆಯು ‘ಲವ್ ಜಿಹಾದ್’ ಪ್ರಕರಣವನ್ನು ವರದಿ ಮಾಡಿಲ್ಲ ಎಂದರು.
ಕೇರಳ ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಅಭಿಪ್ರಾಯವನ್ನು ದೃಢೀಕರಿಸಿವೆ.
ಆದರೆ ಕೇರಳದ ಎರಡು ಅಂತರ್‌ಧರ್ಮೀಯ ವಿವಾಹ ಪ್ರಕರಣಗಳ ಬಗ್ಗೆ ಎನ್‌ಐಎ ತನಿಖೆ ನಡೆಸಿತ್ತು ಎಂದು ರೆಡ್ಡಿ ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ಕೇರಳದಲ್ಲಿ ಯಾವುದೇ ಲವ್ ಜಿಹಾದ್ ಪ್ರಕರಣ ವರದಿಯಾಗಿದೆಯೇ ಎಂಬ ಆ ರಾಜ್ಯದ ಕಾಂಗ್ರೆಸ್ ನಾಯಕ ಬೆನ್ನಿ ಬೆಹಾನನ್ ಅವರು ಪ್ರಶ್ನಿಸಿದ್ದರು.
ಕೇರಳದಲ್ಲಿ ಯುವತಿಯರ ಪರಾರಿಯ ಹಲವಾರು ಶಂಕಿತ ಪ್ರಕರಣಗಳನ್ನು ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿದ್ದವು ಮತ್ತು ಈ ಪ್ರಕರಣಗಳಿಗೆ ‘ಲವ್ ಜಿಹಾದ್ ’ಹಣೆಪಟ್ಟಿಯನ್ನು ಅಂಟಿಸಲಾಗಿತ್ತು. ಈ ಪೈಕಿ 2018ರ ಹಾದಿಯಾ ಪ್ರಕರಣ ಹೆಚ್ಚು ಸದ್ದು ಮಾಡಿತ್ತು.







