‘ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್’ ಬಿಜೆಪಿಯ ರಾಜಕೀಯ ಅಜೆಂಡಾ: ಬಿ.ಎಂ. ಹನೀಫ್
ದ.ಕ. ಜಿಲ್ಲಾ ಮಟ್ಟದ ಬ್ಯಾರಿ ಪ್ರತಿನಿಧಿಗಳ ಸಮಾವೇಶ

ಮಂಗಳೂರು, ಫೆ.4: ಕೇಂದ್ರ ಸರಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ದೇಶಾದ್ಯಂತ ಪರ ಮತ್ತು ವಿರೋಧ ಹಾಗೂ ಅದರಿಂದ ನಮಗೇನೂ ಆಗುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಆದರೆ ಇದು ಬಿಜೆಪಿಯ ಪಕ್ಕಾ ರಾಜಕೀಯ ಅಜೆಂಡಾ ಎಂಬುದರಲ್ಲಿ ಸಂಶಯವಿಲ್ಲ. ದೇಶದ ಹಿಂದೂ-ಮುಸ್ಲಿಮರು ಜಾತಿ-ಧರ್ಮದ ಹೆಸರಿನಲ್ಲಿ ಪರಸ್ಪರ ಹೊಡೆದಾಡಿ ಕೊಳ್ಳಬೇಕು. ಕನಿಷ್ಠ 10 ವರ್ಷದವರೆಗೂ ಇದು ‘ಸಮಸ್ಯೆ’ಯಾಗಿ ಉಳಿಯಬೇಕು. ಅದರ ರಾಜಕೀಯ ಲಾಭವನ್ನು ಸದಾ ಪಡೆಯುತ್ತಿರಬೇಕು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ ಎಂದು ಪತ್ರಕರ್ತ ಬಿಎಂ ಹನೀಫ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಬ್ಯಾರಿ ಪರಿಷತ್ ಮಂಗಳೂರು ಹಾಗೂ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ದ.ಕ. ಜಿಲ್ಲಾ ಸಮಿತಿಯ ಆಶ್ರಯದಲ್ಲಿ ತೊಕ್ಕೊಟ್ಟು ಸಮೀಪದ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ಮಂಗಳವಾರ ನಡೆದ ಬ್ಯಾರಿ ಪ್ರತಿನಿಧಿಗಳ ಸಮಾವೇಶದ ಪ್ರಥಮ ಅಧಿವೇಶನದಲ್ಲಿ ‘ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್- ಇದರ ಸಾಧಕ ಭಾದಕ’ಗಳ ಬಗ್ಗೆ ಅವರು ವಿಷಯ ಮಂಡಿಸಿದರು.
ಪೌರತ್ವ ಕಾಯ್ದೆಯ ತಿದ್ದುಪಡಿ ಹೊಸತೇನಲ್ಲ. ಈಗಾಗಲೆ 10 ಬಾರಿ ತಿದ್ದುಪಡಿಯಾಗಿದೆ. ಆದರೆ ಈ ಬಾರಿಯ ತಿದ್ದುಪಡಿಯು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಂಸತ್ತಿನಲ್ಲಿ ಬಹುಮತವಿದ್ದರೂ ಕೂಡ ಮೂಲ ಅಶಯಕ್ಕೆ ತಿದ್ದುಪಡಿ ಮಾಡುವಂತಿಲ್ಲ ಎಂದ ಬಿಎಂ ಹನೀಫ್, ಜನಗಣತಿಯು ಭಾರತಕ್ಕೆ ಹೊಸತೇನಲ್ಲ. ಪ್ರತೀ 10 ವರ್ಷಕ್ಕೊಮ್ಮೆ ಇದು ನಡೆಯುತ್ತಲೇ ಇದೆ. ಆದರೆ, ಈ ಬಾರಿ ಎನ್‌ಪಿಆರ್ ಮೂಲಕ 6 ಹೊಸ ಅನಗತ್ಯ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಎನ್‌ಪಿಆರ್ ದಾಖಲೆಯ ಆಧಾರದ ಮೇಲೆಯೇ ಎನ್‌ಆರ್‌ಸಿ ಪಟ್ಟಿಯನ್ನು ರಚಿಸಲಾಗುತ್ತದೆ. ಹಾಗಾಗಿ ಒಂದಕ್ಕೊಂದು ಥಳಕು ಹಾಕಿಕೊಂಡಿರುವ ಎನ್‌ಆರ್‌ಸಿ, ಎನ್‌ಪಿಆರ್ ಬಗ್ಗೆ ಜಾಗರೂಕರಾಗಿರಬೇಕಿದೆ ಎಂದು ಹೇಳಿದರು.
ಅಸ್ಸಾಮಿನಲ್ಲಿ 3 ಕೋಟಿ ಜನರ ಎನ್‌ಪಿಆರ್‌ಗಾಗಿ ಮೂರು ವರ್ಷದಲ್ಲಿ 1,600 ಕೋ.ರೂ. ವ್ಯಯಿಸಲಾಗಿದೆ. ಆದರೆ ಇದರಿಂದ ಏನನ್ನು ಸಾಧಿಸಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ದೇಶದ 130 ಕೋಟಿ ಜನರ ಎನ್‌ಪಿಆರ್ ಮಾಡಲು ಎಷ್ಟು ವರ್ಷ ಬೇಕಾದೀತು, ಎಷ್ಟು ಲಕ್ಷ ಗಜೆಡೆಟ್ ಅಧಿಕಾರಿಗಳು ಮತ್ತು ಎಷ್ಟು ಕೋಟಿ ಹಣ ಬೇಕು ಎಂಬುದರ ಬಗ್ಗೆಯೂ ನಿಖರ ಮಾಹಿತಿ ಇಲ್ಲ. ಈ ಬಾರಿಯ ಬಜೆಟ್‌ನಲ್ಲೂ ಹಣವನ್ನು ಇದಕ್ಕಾಗಿ ಮೀಸಲಿಟ್ಟಿಲ್ಲ. ಹೀಗಿರುವಾಗ ಎನ್‌ಆರ್‌ಸಿ ಜಾರಿಯಾಗುವುದು ಸಂಶಯ. ಇದನ್ನು ಬಿಜೆಪಿಯು ಕೋಮುಧ್ರುವೀಕರಣ ಮಾಡಿಕೊಂಡು ರಾಜಕೀಯ ಲಾಭ ಗಳಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಇದೊಂದು ವಿಫಲ ಪ್ರಯೋಗವಾಗಿದೆ. ಇದು ಹೀಗೆ ಮುಂದುವರಿದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಇದನ್ನು ವಿರೋಧಿಸಿ ಜನರು ನ್ಯಾಯಾಲಯದ ಮೆಟ್ಟಲೇರುವ ಅವಕಾಶವೂ ಇದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಬಿಎಂ ಹನೀಫ್ ಹೇಳಿದರು.
ಮೀಫ್ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಝೀರ್ ಉಳ್ಳಾಲ್, ಬಿಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಮರ್ ಪಜೀರ್ ಉಪಸ್ಥಿತರಿದ್ದರು. ಜೆ. ಹುಸೈನ್ ವಿಷಯ ಮಂಡನೆಗೆ ಪ್ರತಿಕ್ರಿಯಿಸಿದರು. ಮೂಸಬ್ಬ ಬ್ಯಾರಿ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಹಕ್ ವಂದಿಸಿದರು.
ಉದ್ಘಾಟನಾ ಸಮಾರಂಭ: ಸಮಾವೇಶವನ್ನು ಹಾಜಿ ಬಿ.ಎಂ. ಮುಮ್ತಾಝ್ ಅಲಿ ಉದ್ಘಾಟಿಸಿದರು. ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ದ.ಕ. ಜಿಲ್ಲಾಧ್ಯಕ್ಷ ಅಹ್ಮದ್ ಮೊಹಿಯುದ್ದೀನ್ ವರ್ಲ್ಡ್‌ವೈಡ್ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷ ಮನ್ಸೂರ್ ಅಹ್ಮದ್ ಅಝಾದ್, ದ.ಕ.ಜಿಲ್ಲೆಯ ಮುಸ್ಲಿಮರ ಪ್ರಗತಿಗಾಗಿ ಎಲ್ಲರೂ ಒಗ್ಗೂಡಬೇಕು. ಅದಕ್ಕಾಗಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳ ಬೇಕು. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಮುದಾಯವನ್ನು ತಳಮಟ್ಟದಿಂದಲೇ ಸುಭದ್ರಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕಿದೆ ಎಂದರು.
ವೇದಿಕೆಯಲ್ಲಿ ಹಾಜಿ ಇಬ್ರಾಹೀಂ ಕೋಡಿಜಾಲ್, ಎಸ್‌ಎಂ ರಶೀದ್ ಹಾಜಿ, ಹಾಜಿ ಅಬ್ದುಲ್ ರಶೀದ್ ಉಳ್ಳಾಲ, ಹೈದರ್ ಪರ್ತಿಪ್ಪಾಡಿ, ಎನ್‌ಎಸ್ ಕರೀಂ, ಅಬ್ದುಲ್ ಮಜೀದ್ ಸೂರಲ್ಪಾಡಿ, ಮುಹಮ್ಮದ್ ಮೋನು, ಅಥಾವುಲ್ಲಾ ಜೋಕಟ್ಟೆ, ಫಾರೂಕ್ ಉಳ್ಳಾಲ್, ಸಿದ್ದೀಕ್ ಫರಂಗಿಪೇಟೆ, ಅಹ್ಮದ್ ಬಾವ ಬಜಾಲ್, ಯಾಕೂಬ್ ಅಹ್ಮದ್ ಗುರುಪುರ ಉಪಸ್ಥಿತರಿದ್ದರು.
ಸುಲ್ತಾನ್ ಬಿನ್ ನಝೀರ್ ಕಿರಾಅತ್ ಪಠಿಸಿದರು. ಎಐಎಂಡಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್ ನೂರ್ ವಂದಿಸಿದರು.
ದ್ವಿತೀಯ ಅಧಿವೇಶನದಲ್ಲಿ ‘ಭಾರತೀಯ ಮುಸ್ಲಿಮರ ಸ್ಥಿತಿಗತಿ ಅಂದು-ಇಂದು-ಮುಂದು’ ಎಂಬ ಸಾಕ್ಷ್ಯಚಿತ್ರವನ್ನು ಎಐಎಂಡಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಬಂಟ್ವಾಳ ನಡೆಸಿಕೊಟ್ಟರು. ವೇದಿಕೆಯಲ್ಲಿ ಹಸನ್ ಬಾವ ಮಂಗಳೂರು, ಎಫ್‌ಎ ಖಾದರ್ ಅಮೆಮಾರ್, ಎನ್‌ಇ ಮುಹಮ್ಮದ್ ಮಲ್ಲೂರು, ಇಬ್ರಾಹೀಂ ನಡುಪದವು, ಅಬ್ದುಲ್ ಬಶೀರ್ ಮೊಂಟೆಪದವು ಉಪಸ್ಥಿತರಿದ್ದರು. ಸಮಾವೇಶದ ಆರ್ಥಿಕ ಸಮಿತಿಯ ಸಂಚಾಲಕ ಆರಿಫ್ ಬಾವ ವಂದಿಸಿದರು.
ತೃತೀಯ ಅಧಿವೇಶನದಲ್ಲಿ ‘ಚುನಾಯಿತ ಸಂಸ್ಥೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಮತ್ತು ಸಾಂವಿಧಾನಿಕವಾಗಿ ಮೀಸಲಾತಿಯ ಪರಿಕಲ್ಪನೆ’ ಎಂಬ ವಿಷಯದಲ್ಲಿ ಮಾತನಾಡಿದ ಎಬಿಬಿಪಿ ಅಧ್ಯಕ್ಷ, ನ್ಯಾಯವಾದಿ ಬಿಎ ಮುಹಮ್ಮದ್ ಹನೀಫ್ ‘ಸ್ಥಳೀಯಾಡಳಿತ ಚುನಾಯಿತ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಯಿಂದಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದರೂ ಕೂಡ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ರಾಜಕೀಯ ಮೀಸಲಾತಿ ಇಲ್ಲ. ಅದಕ್ಕಾಗಿ ಸರಕಾರದ ಮುಂದೆ ಆಗ್ರಹಿಸಬೇಕಿದೆ. ರಾಜ್ಯದಲ್ಲಿ ‘2ಎ’ ಮೂಲಕ ರಾಜಕೀಯ ಮೀಸಲಾತಿ ಮುಸ್ಲಿಮರಿಗಿದ್ದರೂ ಕೂಡ ಅದರ ಪಾಲನ್ನು ಬಿಲ್ಲವರು ಮತ್ತಿತರರು ಪಡೆಯುತ್ತಿದ್ದಾರೆ. ಹಾಗಾಗಿ ರಾಜಕೀಯ ಮೀಸಲಾತಿಗಾಗಿ ಮುಸ್ಲಿಮರು ಪ್ರತ್ಯೇಕ ಮೀಸಲಾತಿಯ ಬೇಡಿಕೆ ಸಲ್ಲಿಸಬೇಕಿದೆ. ‘2ಬಿ’ಯಲ್ಲಿ ಶಿಕ್ಷಣ, ಉದ್ಯೋಗಕ್ಕಾಗಿ ಶೇ.4ರಷ್ಟು ಮೀಸಲಾತಿ ಸಾಕಾಗದು.ಅದನ್ನು ಶೇ.10ಕ್ಕೇರಿಸುವಂತೆ ಒತ್ತಾಯಿಸಬೇಕಿದೆ. ಈ ಬೇಡಿಕೆಯು ಭಿಕ್ಷೆಯಲ್ಲ. ಅದು ನಮ್ಮ ಹಕ್ಕಾಗಿದೆ. ಅದಕ್ಕಾಗಿ ಧ್ವನಿ ಎತ್ತಬೇಕಿದೆ ಎಂದರು.
ಜಂ ಇಯ್ಯತುಲ್ ಫಲಾಹ್ ದ.ಕ.ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪಮೇಯರ್ ವಿಷಯ ಮಂಡನೆಗೆ ಮುಹಮ್ಮದ್ ಕುಂಜತ್‌ಬೈಲ್ ಪ್ರತಿಕ್ರಿಯಿಸಿದರು. ಹಾಜಿ ಶಾಹುಲ್ ಹಮೀದ್ ಮೆಟ್ರೊ, ಮುಹಮ್ಮದ್ ಹನೀಫ್ ಗೋಳ್ತಮಜಲು, ಅಬ್ಬಾಸ್ ಬಿಜೈ ಉಪಸ್ಥಿತರಿದ್ದರು. ಎಬಿಬಿಪಿ ಪ್ರಧಾನ ಕಾರ್ಯದರ್ಶಿ ಕೆಎಸ್ ಅಬೂಬಕರ್ ಪಲ್ಲಮಜಲು ಸ್ವಾಗತಿಸಿದರು. ಎಐಎಂಡಿಸಿಯ ಝಾಕಿರ್ ಇಖ್ಲಾಸ್ ವಂದಿಸಿದರು.
ಸಮಾರೋಪ ಸಮಾರಂಭ: ವಿಧಾನ ಪರಿಷತ್ ಸದಸ್ಯ ಹಾಜಿ ಬಿ.ಎಂ. ಫಾರೂಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಬಿಎಂ ಹನೀಫ್ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ, ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕರ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಟಿ.ಎಂ. ಫೈಝಲ್, ಅಬ್ಬಾಸ್ ಅಲಿ ಬೊಳಂತೂರು, ಮುಸ್ತಾಕ್ ಪಟ್ಲ, ಅಬ್ದುಲ್ ಲತೀಫ್ ಕಂದಕ್, ಇಸ್ಮತ್ ಪಜೀರ್, ಕೆ.ಪಿ.ಅಹ್ಮದ್ ಹಾಜಿ ಪುತ್ತೂರು, ಬಿಎ ಅಬೂಬಕರ್ ಕಲ್ಲಡಿ, ಇಸ್ಮಾಯೀಲ್ ಪೆರಿಂಜೆ, ಶಾಹುಲ್ ಹಮೀದ್ ಹಳೆಯಂಗಡಿ, ಡಿಎಂ ಅಸ್ಲಂ ಉಪಸ್ಥಿತರಿದ್ದರು.
ಯೂಸುಫ್ ವಕ್ತಾರ್ ನಿರ್ಣಯ ಮಂಡಿಸಿದರು. ಖಾಲಿದ್ ಉಜಿರೆ ಸ್ವಾಗತಿಸಿದರು. ನೌಷಾದ್ ಸೂರಲ್ಪಾಡಿ ವಂದಿಸಿದರು. ಮುಹಮ್ಮದ್ ಶರೀಫ್ ನಿರ್ಮುಂಜೆ ಬ್ಯಾರಿ ಗೀತೆಗಳನ್ನು ಹಾಡಿದರು. ಬಿ.ಎ. ಮುಹಮ್ಮದ್ ಅಲಿ ಮತ್ತು ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಬಿ.ಎಂ. ಹನೀಫ್ ಹೊರತಂದ ‘ಸೆಕ್ಯೂಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್’ ಕೃತಿಯ 2ನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.
















