ಎನ್‌ಎಂಪಿಟಿಗೆ ಆಗಮಿಸಿದ ಬೃಹತ್ ವಿಲಾಸಿ ಹಡಗು

ಮಂಗಳೂರು, ಫೆ.4: ನವ ಮಂಗಳೂರು ಬಂದರ್ ಟ್ರಸ್ಟ್ (ಎನ್‌ಎಂಪಿಟಿ)ಗೆ ಬೃಹತ್ ವಿಲಾಸಿ ಹಡಗೊಂದು ಮಂಗಳವಾರ ಆಗಮಿಸಿದ್ದು, ನಗರದ ವಿವಿಧೆಡೆ ವಿದೇಶಿಗರು ಪ್ರವಾಸ ಕೈಗೊಂಡರು. ಶ್ವೇತ ಬಣ್ಣದ ‘ಕೋಸ್ಟಾ ವಿಕ್ಟೋರಿಯ’ ಹೆಸರಿನ ಬೃಹತ್ ವಿಲಾಸಿ ಹಡಗು ಮಂಗಳವಾರ ಬೆಳಗ್ಗೆ ಎನ್‌ಎಂಪಿಟಿಗೆ ಆಗಮಿಸಿತು.
ಪ್ರವಾಸಿ ಋತುವಿನಲ್ಲಿ ಮಂಗಳೂರಿಗೆ ಪ್ರವೇಶಿಸಿದ 12ನೇ ಹಡಗು ಇದಾಗಿದೆ. ಹಡಗಿನಲ್ಲಿ 1,800 ಪ್ರಯಾಣಿಕರಿದ್ದರು. ಜತೆಗೆ 786 ಹಡಗಿನ ಸಿಬ್ಬಂದಿ ಇದ್ದರು. ನಗರದ ದೇವಸ್ಥಾನ, ಚರ್ಚ್ ಸಹಿತ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ದಿನಪೂರ್ತಿ ಮಂಗಳೂರಲ್ಲೇ ಕಾಲ ಕಳೆದರು.
ಈ ಬೃಹತ್ ವಿಲಾಸಿ ಹಡಗು ಮುಂಬೈನಿಂದ ಮಂಗಳೂರಿನ ಎನ್‌ಎಂಪಿಟಿಗೆ ಆಗಮಿಸಿತ್ತು. ರಾತ್ರಿ 8 ಗಂಟೆಗೆ ಎನ್‌ಎಂಪಿಟಿಯಿಂದ ಕೊಚ್ಚಿನ್ ಕಡೆಗೆ ಪ್ರಯಾಣ ಬೆಳೆಸಿತು.
ಪ್ರವಾಸಿಗರ ತಪಾಸಣೆ: ವಿಶ್ವಾದ್ಯಂತ ಮಾರಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಭೀತಿ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಪ್ರವಾಸಿಗರನ್ನು ಆರೋಗ್ಯ ಕಾರ್ಯಕರ್ತರು ತಪಾಸಣೆ ಮಾಡಿದರು. ಯಾವುದೇ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರವಾಸಕ್ಕೆ ಅನುವು ಮಾಡಿಕೊಟ್ಟರು.









