ಶಾಹೀನ್‌ಬಾಗ್ ಶೂಟರ್ ಆಪ್ ಸದಸ್ಯ ಎಂದ ಪೊಲೀಸರು
ಆಪ್‌ನಿಂದ ನಿರಾಕರಣೆ

ಹೊಸದಿಲ್ಲಿ,ಫೆ.4: ಸಿಎಎ ವಿರುದ್ಧ ಧರಣಿ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿದ್ದ ಕಪಿಲ್ ಬೈಸಲಾ ಆಮ್ ಆದ್ಮಿ ಪಾರ್ಟಿ (ಆಪ್)ಯ ಸದಸ್ಯ ಎಂದು ಪೊಲೀಸರು ಹೇಳಿದ್ದು,ಇದನ್ನು ಆಪ್ ನಿರಾಕರಿಸಿದೆ. ಇದರೊಂದಿಗೆ ಬಿಜೆಪಿ ಮತ್ತು ಆಪ್ ನಡುವೆ ರಾಜಕೀಯ ಕೆಸರೆರಚಾಟ ನಡೆದಿದೆ. ತನ್ಮಧ್ಯೆ ಕಪಿಲ್ ಆಪ್ ಸದಸ್ಯ ಎನ್ನುವುದನ್ನು ಆತನ ಕುಟುಂಬವೂ ನಿರಾಕರಿಸಿದೆ.
ಕಪಿಲ್ ಮತ್ತು ಆತನ ತಂದೆ 2019ರ ಆರಂಭದಲ್ಲಿ ಆಪ್‌ಗೆ ಸೇರ್ಪಡೆಗೊಂಡಿದ್ದರು. ಕಪಿಲ ಹಾಗೂ ಆತನ ತಂದೆ ಆಪ್‌ಗೆ ಸೇರ್ಪಡೆಗೊಳ್ಳುತ್ತಿರುವ ಫೋಟೊಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿದ್ದು,ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ರಾಜೇಶ ದೇವ್ ಮಂಗಳವಾರ ಇಲ್ಲ ಸುದ್ದಿಗಾರರಿಗೆ ತಿಳಿಸಿದರು. ಕಪಿಲ್ ಆಪ್ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಇರುವ ಫೋಟೊಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಆಪ್ ಅನ್ನು ತರಾಟೆಗೆತ್ತಿಕೊಂಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡುತ್ತಿದ್ದಾರೆ ಮತ್ತು ಅಂತಹವರನ್ನು ದೇಶವು ಎಂದಿಗೂ ಕ್ಷಮಿಸುವುದಿಲ್ಲ. ದಿಲ್ಲಿಯ ಜನರು ಸೂಕ್ತ ಉತ್ತರವನ್ನು ನೀಡಲಿದ್ದಾರೆ ಎಂದು ಟ್ವೀಟಿಸಿದ್ದಾರೆ.
ಚುನಾವಣೆ ಸಮೀಪಿಸಿರುವಾಗ ದಿಲ್ಲಿ ಪೊಲೀಸರು ಹೇಳಿಕೆಯನ್ನು ನೀಡಿರುವ ಸಮಯ ಮತ್ತು ಅದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿರುವ ಕೇಜ್ರಿವಾಲ್,ದೇವ್ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಈ ಸಂಚಿನಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ? ಇಂತಹ ಹೇಳಿಕೆಗಳನ್ನು ನೀಡುವಂತೆ ದೇವ್‌ಗೆ ಗೃಹಸಚಿವ ಅಮಿತ್ ಶಾ ಸೂಚಿಸುತ್ತಿದ್ದಾರೆಯೇ? ಯಾರ ನಿರ್ದೇಶನದ ಮೇರೆಗೆ ದೇವ್ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡಿದ್ದರು ಎಂದು ಆಪ್ ನಾಯಕ ಸಂಜಯ ಸಿಂಗ್ ಪ್ರಶ್ನಿಸಿದರು. ತನಿಖೆಯಿನ್ನೂ ಪ್ರಗತಿಯಲ್ಲಿರುವಾಗ ಶೂಟರ್ ಆಪ್‌ಗೆ ಸೇರಿದವನು ಎಂದು ದೇವ್ ಹೇಳಿದ್ದೇಕೆ ಎಂದೂ ಅವರು ಪ್ರಶ್ನಿಸಿದರು.
ಇದಕ್ಕೂ ಮುನ್ನ ಸಿಂಗ್ ಅವರು ಈ ಘಟನೆಯು ಬಿಜೆಪಿಯ ಪಿತೂರಿಯಾಗಿದೆ ಮತ್ತು ಅದರ ಕೊಳಕು ರಾಜಕೀಯಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದಿದ್ದರು.
‘ಎಲ್ಲಿಂದ ಈ ಚಿತ್ರಗಳು ಹರಿದಾಡುತ್ತಿವೆ ಎನ್ನುವದು ನನಗೆ ಗೊತ್ತಿಲ್ಲ. ಕಪಿಲ್ ಗಾಗಲೀ ನನ್ನ ಕುಟುಂಬದ ಇತರ ಸದಸ್ಯರಿಗೆ ಯಾವುದೇ ರಾಜಕೀಯ ಪಕ್ಷದ ನಂಟಿಲ್ಲ. ನನ್ನ ಸೋದರ ಗಜೆ ಸಿಂಗ್ (ಕಪಿಲ ತಂದೆ) 2008ರಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಆ ಬಳಿಕ ಕುಟುಂಬದ ಯಾರೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ’ಎಂದು ಕಪಿಲ್ ಚಿಕ್ಕಪ್ಪ ಫತೇಶ ಸಿಂಗ್ ಹೇಳಿದರು.







