ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ: ಭಾರತ ತಂಡಕ್ಕೆ ಪೃಥ್ವಿಶಾ ವಾಪಸ್

ಹೊಸದಿಲ್ಲಿ, ಫೆ.4: ನ್ಯೂಝಿಲ್ಯಾಂಡ್ ವಿರುದ್ಧ ಫೆ.21ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮಂಗಳವಾರ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ದೀರ್ಘ ಸಮಯದ ಬಳಿಕ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ.
16 ಸದಸ್ಯರುಗಳು ಇರುವ ಟೆಸ್ಟ್ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಇಶಾಂತ್ ಶರ್ಮಾ ಹಾಗೂ ದಿಲ್ಲಿಯ ವೇಗಿ ನವದೀಪ್ ಸೈನಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಇಶಾಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ಇನ್ನೂ ಪಾಸಾಗಿಲ್ಲ. ಇಶಾಂತ್ ಕಳೆದ ತಿಂಗಳು ವಿದರ್ಭ ವಿರುದ್ಧ ರಣಜಿ ಟ್ರೋಫಿ ಪಂದ್ಯ ಆಡುತ್ತಿದ್ದಾಗ ಗಾಯಗೊಂಡಿದ್ದರು. ಇತ್ತೀಚೆಗೆ ನ್ಯೂಝಿಲ್ಯಾಂಡ್ ‘ಎ’ ವಿರುದ್ಧ ಚತುರ್ದಿನ ಟೆಸ್ಟ್‌ನಲ್ಲಿ ಭಾರತ ‘ಎ’ ತಂಡದ ಪರ ಔಟಾಗದೆ ದ್ವಿಶತಕ ಸಿಡಿಸಿದ್ದ ಶುಭಮನ್ ಗಿಲ್ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪಂಜಾಬ್ ಬ್ಯಾಟ್ಸ್‌ಮನ್ ಗಿಲ್ ಆಯ್ಕೆಯಾಗಿದ್ದರು.
ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆದ ಐದನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಕಾಲುನೋವಿಗೆ ತುತ್ತಾಗಿದ್ದ ರೋಹಿತ್ ಸರಣಿಯಿಂದಲೇ ದೂರ ಉಳಿದಿದ್ದಾರೆ. ಸೋಮವಾರ ರೋಹಿತ್ ಅಲಭ್ಯತೆಯನ್ನು ದೃಢಪಡಿಸಲಾಗಿದೆ. ‘‘ರವಿವಾರ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ಐದನೇ ಟ್ವೆಂಟಿ-20 ಪಂದ್ಯದ ವೇಳೆ ರೋಹಿತ್ ಕಾಲಿಗೆ ಗಾಯವಾಗಿದೆ. ಸೋಮವಾರ ಅವರು ಹ್ಯಾಮಿಲ್ಟನ್‌ನಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಗಳಿಂದ ಹೊರಗುಳಿದಿದ್ದಾರೆ. ಅವರ ಗಾಯದ ಸಮಸ್ಯೆಯ ನಿರ್ವಹಣೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ಕಳುಹಿಸಿಕೊಡಲಾಗಿದೆ’’ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಮತ್ತೊಂದೆಡೆ, ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಸುಮಾರು ಒಂದು ವರ್ಷದ ಬಳಿಕ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಡೋಪಿಂಗ್ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ 8 ತಿಂಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಶಾ 2018ರಲ್ಲಿ ಸ್ವದೇಶದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಟೆಸ್ಟ್ ಸರಣಿಯನ್ನು ಆಡಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಗೂ ಶಾ ಆಯ್ಕೆಯಾಗಿದ್ದರು. ಆದರೆ, ನೆಟ್ ಪ್ರಾಕ್ಟೀಸ್‌ನ ವೇಳೆ ಮಂಡಿನೋವು ಕಾಣಿಸಿಕೊಂಡ ಕಾರಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. 2019ರ ಆವೃತ್ತಿ ಐಪಿಎಲ್ ವೇಳೆಗೆ ಗಾಯದಿಂದ ಚೇತರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.
8 ತಿಂಗಳ ನಿಷೇಧದ ಬಳಿಕ ಕಳೆದ ವರ್ಷದ ನವೆಂಬರ್‌ನಲ್ಲಿ ಸಕ್ರಿಯ ಕ್ರಿಕೆಟ್‌ಗೆ ಮರಳಿದ್ದ ಶಾ ಮುಂಬೈ ಹಾಗೂ ಭಾರತ ‘ಎ’ ತಂಡದ ಪರ ಸಾಕಷ್ಟು ರನ್ ಗಳಿಸಿದ್ದರು. ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧ ಮುಂಬೈ ಪರ ಜೀವನಶ್ರೇಷ್ಠ ಸ್ಕೋರ್(202)ಗಳಿಸಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಮುಂಬೈ ಪರ 5 ಇನಿಂಗ್ಸ್‌ಗಳಲ್ಲಿ 240 ರನ್ ಗಳಿಸಿದ್ದರು. ನ್ಯೂಝಿಲ್ಯಾಂಡ್‌ಗೆ ಭಾರತ ‘ಎ’ ತಂಡದೊಂದಿಗೆ ತೆರಳಿರುವ ಶಾ ನ್ಯೂಝಿಲ್ಯಾಂಡ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್ ಗಳಿಸಿದ್ದರು. 3 ಅನಧಿಕೃತ ಏಕದಿನ ಇನಿಂಗ್ಸ್‌ಗಳಲ್ಲಿ 105 ರನ್ ಕಲೆ ಹಾಕಿದ್ದರು. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ್ದ ವೇಗದ ಬೌಲರ್ ನವದೀಪ್ ಸೈನಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕೈಕ ಪಂದ್ಯದಲ್ಲಿ ಸೈನಿ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅವರು ಇನ್ನಷ್ಟೇ ಚೊಚ್ಚಲ ಟೆಸ್ಟ್ ಪಂದ್ಯ ಆಡಬೇಕಾಗಿದೆ. ಸೈನಿ ಭಾರತದ ಪರವಾಗಿ 3 ಏಕದಿನ ಹಾಗೂ 10 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಸ್ವದೇಶದಲ್ಲಿ ನಡೆದ ಇಡೀ ಸರಣಿಯಿಂದ ವಂಚಿತವಾಗಿದ್ದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಒಂದೂ ಪಂದ್ಯವನ್ನು ಆಡದ ಸ್ಪಿನ್ನರ್ ಕುಲದೀಪ್ ಯಾದವ್‌ರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಆಯ್ಕೆಗಾರರು ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್‌ಗೆ ಆದ್ಯತೆ ನೀಡಿದ್ದಾರೆ. ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕದಿನ ಸರಣಿಯು ಬುಧವಾರ ಹ್ಯಾಮಿಲ್ಟನ್‌ನಲ್ಲಿ ಆರಂಭವಾದರೆ, 2 ಪಂದ್ಯಗಳ ಟೆಸ್ಟ್ ಸರಣಿಯು ಫೆ.21ರಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ.
<ಭಾರತದ ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ಹನುಮ ವಿಹಾರಿ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ರಿಷಭ್ ಪಂತ್(ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮುಹಮ್ಮದ್ ಶಮಿ, ನವದೀಪ ಸೈನಿ, ಇಶಾಂತ್ ಶರ್ಮಾ.







