ಫೆ.13ರಂದು ಕರ್ನಾಟಕ ಬಂದ್‌ಗೆ ಕರೆ
ಬೆಂಗಳೂರು, ಫೆ.4: ಡಾ. ಸರೋಜಿನಿ ಮಹಿಷಿ ವರದಿ ಸಂಬಂಧಿಸಿದಂತೆ ಕನ್ನಡಿಗರ ಉದ್ಯೋಗಕ್ಕಾಗಿ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಫೆ.13ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಮಂಗಳವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಚಳುವಳಿ ನಾಗೇಶ್, ರಾಜ್ಯದ ನೂರಾರು ಸಂಘಟನೆಗಳ ನೇತೃತ್ವದಲ್ಲಿ ಸುಮಾರು 93 ದಿನಗಳಿಂದ ಕನ್ನಡಿಗರ ಉದ್ಯೋಗಕ್ಕಾಗಿ ಮಾಡುತ್ತಿರುವ ಹೋರಾಟಕ್ಕೆ ರಾಜ್ಯದ 40ಕ್ಕೂ ಹೆಚ್ಚು ಮಠಾಧೀಶರು, ರಾಜಕೀಯ ಮುಖಂಡರು, ಸಂಘಟನೆಗಳ ಮುಖಂಡರು, ಸಾಹಿತಿಗಳು, ಚಿಂತಕರು, ದಲಿತ, ಕನ್ನಡ, ಮಹಿಳಾ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಈಗಾಗಲೇ ಪ್ರತಿಭಟನಾ ಸ್ಥಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಕಾರ್ಮಿಕ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳು ಆಗಮಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟರು. ಆದರೆ, ಇದುವರೆಗೂ ಸಹ ಯಾವುದೇ ಸಮಯ ನಿಗದಿ ಮಾಡಲಿಲ್ಲ. ಅಲ್ಲದೇ ಉದ್ಯೋಗ ನೀಡುವ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ. ಆದ್ದರಿಂದ ಫೆ.13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಫೆ.13ರಂದು ರಾಜ್ಯ ಸರಕಾರಿ ವಲಯದ ಉದ್ಯಮಗಳಲ್ಲಿ ಶೇ.100ರಷ್ಟು, ಕಚೇರಿಗಳಲ್ಲಿ ಶೇ.100ರಷ್ಟು, ಬ್ಯಾಂಕ್ ಇತರ ಹಣಕಾಸು ಸಂಸ್ಥೆಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡುವುದು ಸೇರಿದಂತೆ ಮಹದಾಯಿ ಯೋಜನೆ ಜಾರಿ ಮಾಡಬೇಕು ಹಾಗೂ ಮೇಕೆದಾಟು ಯೋಜನೆ ಶೀಘ್ರದಲ್ಲಿ ಪ್ರಾರಂಭ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.







