ಫೆ.7ರಂದು ಬೀದರ್‌ನಲ್ಲಿ ರಾಜ್ಯಮಟ್ಟದ ಪಶುಮೇಳ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು, ಫೆ.4: ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜ್ಯಮಟ್ಟದ ಪಶುಮೇಳ-2020ನ್ನು ಆಯೋಜಿಸಲಾಗಿದ್ದು, ಫೆ.7ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೀದರ್‌ನಲ್ಲಿ ಪಶುಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಪಶುಸಂಗೋಪನೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮೇಳದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 26ಕ್ಕೂ ಹೆಚ್ಚು ತಳಿಗಳ ಜಾನುವಾರುಗಳು ಪ್ರದರ್ಶನದಲ್ಲಿ ನೋಡುಗರ ಗಮನ ಸೆಳೆಯಲಿವೆ. ಅಲ್ಲದೆ ಈ ಮೇಳದಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದರು.
ಪಶುಸಂಗೋಪನೆ ಇಲಾಖೆಯಿಂದ 2017-18ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪಶು ಮೇಳ ಆಯೋಜಿಸಲಾಗಿತ್ತು. ಈ ಬಾರಿ ಬೀದರ್‌ನಲ್ಲಿ ಫೆ.7 ರಿಂದ 9ರವರೆಗೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.
ವಿವಿಧ ಪ್ರಮುಖ ತಳಿಗಳ ಪ್ರದರ್ಶನ ಮತ್ತು ಪಶುಪಾಲನಾ ಇಲಾಖೆಯ ಚಟುವಟಿಕೆಗಳ ಬಗ್ಗೆ ರೈತರಿಗೆ, ಜಾನುವಾರು ಮಾಲಕರಿಗೆ ಮತ್ತು ಸಾರ್ವಜನಿಕರಿಗೆ ಪ್ರದರ್ಶನವನ್ನು ನೀಡುವುದರ ಮೂಲಕ ರೈತರಲ್ಲಿ ಹೆಚ್ಚಿನ ಅರಿವು ಮತ್ತು ಪ್ರೋತ್ಸಾಹ ನೀಡುವುದಕ್ಕಾಗಿ ಪಶು ಮೇಳವನ್ನು ಆಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.
ಪಶುಮೇಳದಲ್ಲಿ ಭಾಗವಹಿಸುವ ಎಲ್ಲ ರೈತರಿಗೆ ಮತ್ತು ಜಾನುವಾರುಗಳ ಮಾಲಕರಿಗೆ ಹೈನುಗಾರಿಕೆ, ಜಾನುವಾರು ಸಾಕಾಣಿಕೆ, ಕುರಿಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಹಾಗೂ ಜಾನುವಾರು ಸಂಬಂಧಿತ ಇನ್ನಿತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಮಳಿಗೆಗಳನ್ನು ತೆರೆಯಲು ಕ್ರಮವಹಿಸಲಾಗಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.
ರಾಜ್ಯದ ಎಲ್ಲ ರೈತರು ಮತ್ತು ಜಾನುವಾರುಗಳ ಮಾಲಕರು ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ರೈತರು ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಹಾಲು ಕರೆಯುವ ಸ್ಪರ್ಧೆ: ಮಿಶ್ರ ತಳಿ ಹಸು ವಿಭಾಗದಲ್ಲಿ ದೇಶಿ ಹಸು, ದೇವಣಿ ಹಸು, ಎಮ್ಮೆ ಈ ವಿಭಾಗಗಳಲ್ಲಿ ರೈತರನ್ನು ಪ್ರೋತ್ಸಾಹಿಸಲು ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನವಾಗಿ 30 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 20 ಸಾವಿರ ರೂ. ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪಶುಮೇಳದ ಆಕರ್ಷಣೆಗಳು:
ಜಾನುವಾರು ಸಾಕಾಣಿಕೆ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಮೊಲಗಳ ವೈಜ್ಞಾನಿಕ ಸಾಕಾಣಿಕೆ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು.
ಹೈನುಗಾರಿಕೆ: ಹೈನುರಾಸುಗಳ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿ, ಶುದ್ಧ ಹಾಲು ಉತ್ಪಾದನೆ, ಸಂಸ್ಕರಣೆ ಬಗ್ಗೆ ವಿವರಗಳನ್ನು ಒದಗಿಸಲಾಗುವುದು ಎಂದು ಪ್ರಭು ಚವ್ಹಾಣ್ ಹೇಳಿದರು.
ಕುಕ್ಕುಟ ಸಾಕಾಣಿಕೆ: ಗಿರಿರಾಜ, ಸ್ವರ್ಣಧಾರ ಮತ್ತು ವಿವಿಧ ಕೋಳಿ ತಳಿಗಳ ಸಾಕಾಣಿಕೆ ಮತ್ತು ಉತ್ಪನ್ನಗಳ ಪ್ರದರ್ಶನ ನೀಡಲಾಗುವುದು.
ಮೌಲ್ಯವರ್ಧಿತ ಪಶು ಉತ್ಪನ್ನಗಳು: ಹಾಲು, ಮಾಂಸ ಮತ್ತು ಉಣ್ಣೆ ಉತ್ಪನ್ನಗಳ ಮಾಹಿತಿ ಮತ್ತು ಮಾರಾಟ ಜಾನುವಾರು ಆರೋಗ್ಯ: ಔಷಧಿ, ಲಸಿಕೆ ಮತ್ತು ರೋಗ ಪತ್ತೆ ಸಾಧನಗಳ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.
ಪಶುಮೇಳದಲ್ಲಿ ವಿವಿಧ ಜಾನುವಾರು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ವಾನ ಪ್ರದರ್ಶನ, ಕರುಗಳ ಪ್ರದರ್ಶನ, ಮತ್ಸ್ಯಪ್ರದರ್ಶನ, ಫಲ ಪುಷ್ಪಪ್ರದರ್ಶನ, ಜಲಾನಯದ ಪ್ರಾತ್ಯಕ್ಷಿಕೆ ಪ್ರಚುರ ಪಡಿಸಲಾಗುವುದು. ಪ್ರಗತಿಪರ ಹೈನುಗಾರರು, ಕೋಳಿ ಸಾಕಾಣಿಕೆದಾರರು, ಕುರಿ ಮತ್ತು ಮೇಕೆ ಸಾಕಾಣಿಕೆದಾರರೊಂದಿಗೆ ರೈತರ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.
ಪಶುಸಂಗೋಪನೆ ಇಲಾಖೆಯ ಆಯುಕ್ತ ನಟೇಶ್ವರು ಮಾತನಾಡಿ, ಪಶುಮೇಳದಲ್ಲಿ ವೈಜ್ಞಾನಿಕವಾಗಿ ಪಶುಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಕುರಿತಾದ ಚರ್ಚೆಗಳನ್ನು ಸಹ ರೈತರಿಗೆ ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಮೇಳ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್ ಹಾಜರಿದ್ದರು.







