ದ.ಕ. ಜಿಲ್ಲಾ ರೆಡ್‌ಕ್ರಾಸ್ ನಿಂದ 25 ಸೆಂಟ್ಸ್ ಜಾಗದಲ್ಲಿ ರೆಡ್‌ಕ್ರಾಸ್ ಭವನ: ಶಾಂತರಾಮ್ ಶೆಟ್ಟಿ

ಮಂಗಳೂರು, ಫೆ.5: ದ.ಕ. ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಇದರಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೆಡ್‌ಕ್ರಾಸ್ ಭವನ ನಿರ್ಮಾಣ ಮಾಡಲಾಗುವುದು ಎಂದು ರೆಡ್‌ಕ್ರಾಸ್‌ನ ಅಧ್ಯಕ್ಷ ಸಿಎ ಶಾಂತರಾಮ್ ಶೆಟ್ಟಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ರೆಡ್‌ಕ್ರಾಸ್ ಪದಾಧಿಕಾರಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.
ದ.ಕ. ಜಿಲ್ಲಾಧಿಕಾರಿ ಆವರಣದಲ್ಲಿ 25 ಸೆಂಟ್ಸ್ ಜಮೀನನ್ನು ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವ ದಾಸ್ತಾನು ಮಳಿಗೆ, ಸುಸಜ್ಜಿತ ತರಬೇತಿ ಕೇಂದ್ರ ಹಾಗೂ ಸಭಾಭವನ ನಿರ್ಮಾಣವಾಗಲಿದೆ ಎಂದರು.
ನಗರದ ಎಲ್ಲಾ ರಕ್ತನಿಧಿಗಳ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿನಿಯರ ಹಾಗೂ ಇತರ ಮಹಿಳೆಯರ ರಕ್ತದ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿ ಮಹಿಳೆಯರಿಂದ ರಕ್ತದಾನ ಶಿಬಿರವನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರ ಮಟ್ಟದ ಯುವ ರೆಡ್‌ಕ್ರಾಸ್ ವಾರ್ಷಿಕ ತರಬೇತಿ ಶಿಬಿರವನ್ನು ಕೂಡಾ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ತಾಲೂಕು ಮಟ್ಟದಲ್ಲಿ ರೆಡ್‌ಕ್ರಾಸ್ ಶಾಖೆಗಳನ್ನು ಸ್ಥಾಪಿಸುವುದು ಹಾಗೂ ಪುನಶ್ಚೇತನಗೊಳಿಸುವ ಮೂಲಕ ಗ್ರಾಮೀಣ ಭಾಗಕ್ಕೂ ರೆಡ್‌ಕ್ರಾಸ್ ಸೇವೆಯನ್ನು ವಿಸ್ತರಿಸಲು ಚಿಂತಿಸಲಾಗಿದೆ. ಶತಮಾನೋತ್ಸವದ ಅಂಗವಾಗಿ ದ.ಕ. ಜಿಲ್ಲಾ ಶಾಖೆಯ ಸದ್ಯದ 2044 ಅಜೀವ ಸದಸ್ಯರ ಸಂಖ್ಯೆಯನ್ನು 2500ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ರೆಡ್‌ಕ್ರಾಸ್‌ನಿಂದ ರಕ್ತದಾನ ಶಿಬಿಗಳನ್ನು ಜಿಲ್ಲಾದ್ಯಂತ ಆಯೋಜಿಸಿ ರಕ್ತನಿಧಿಗೆ ರಕ್ತ ಸಂಗ್ರಹದ ಜತೆಗೆ ಯುವ ಜನಾಂಗದಲ್ಲಿ ಸೇವಾ ಮನೋಭಾವವನ್ನು ಪ್ರೇರೇಪಿಸಲಾಗುತ್ತಿದೆ. ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ರಕ್ತವನ್ನು ಒದಗಿಸಲಾಗುತ್ತಿದ್ದು, ಜಿಲ್ಲೆಯ ಯಾವುದೇ ಆಸ್ಪತ್ರೆಯ ರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ರಕ್ತವನ್ನು ನೀಡುತ್ತಿರುವುದಾಗಿ ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮ ಮಾಹಿತಿ ನೀಡಿದರು.
ಸಂವಾದದಲ್ಲಿ ಮಾಧ್ಯಮ ಉಪ ಸಮಿತಿಯ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು. ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಫೆ. 11ರಂದು ವೆನ್ಲಾಕ್ ಹೆಲ್ಪ್‌ಡೆಸ್ಕ್ ಆರಂಭ
ಸರಕಾರಿ ಆಸ್ಪತ್ರೆಗೆ ಪ್ರತಿನಿತ್ಯ 800ರಷ್ಟು ರೋಗಿಗಳು ಹಾಗೂ ಅವರ ಸಹಾಯಕರು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಾರೆ. ಅವರಿಗೆ ವೆನ್ಲಾಕ್ ಆಸ್ಪತ್ರೆಯ ಆವರದಲ್ಲಿರುವ ವಿವಿಧ ವಿಭಾಗಗಳಿಗೆ ತೆರಳಲು ಸಹಾಯ ಮಾಡುವ ಉದ್ದೇಶದಿಂದ ಸಮುದಾಯ ಸಹಾಯಕ ಕೇಂದ್ರವನ್ನು ಸ್ವಯಂ ಸೇವಕರ ಸಹಾಯದೊಂದಿಗೆ ಫೆ. 11ರಿಂದ ಆರಂಭಿಸಲಾಗುವುದು ಎಂದು ಶಾಂತಾರಾಮ್ ಶೆಟ್ಟಿ ತಿಳಿಸಿದರು
.gif)







