ತಪ್ಪಿತಸ್ಥ ಪೊಲೀಸರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ: ‘ಡಿ.19 ವಿಕ್ಟಿಮ್ಸ್ ಜಸ್ಟಿಸ್ ಫೋರಂ' ಆಗ್ರಹ
ಮಂಗಳೂರು ಗೋಲಿಬಾರ್ ಪ್ರಕರಣ

ಮಂಗಳೂರು, ಫೆ.5: ಕಳೆದ ಡಿ.19ರಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ‘ಡಿಸೆಂಬರ್ 19 ಗೋಲಿಬಾರ್ ವಿಕ್ಟಿಮ್ಸ್ ಜಸ್ಟಿಸ್ ಫೋರಂ’ ಆಗ್ರಹಿಸಿದೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಫೋರಂನ ಸಂಚಾಲಕ ಅಬ್ದುಲ್ ಜಲೀಲ್ ಕೃಷ್ಣಾಪುರ ‘ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಅಮಾಯಕರ ಜೀವವನ್ನು ಬಲಿ ಪಡೆಯಲಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಅದಕ್ಕಾಗಿ ನ್ಯಾಯಾಂಗ ತನಿಖೆ ನಡೆಸಬೇಕು, ಗೋಲಿಬಾರ್ ನಡೆಸಿ ಅಮಾಯಕರನ್ನು ಕೊಂದ ತಪ್ಪಿತಸ್ಥ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಅಮಾಯಕರನ್ನು ಗುಂಡು ಹೊಡೆದು ಗಂಭೀರ ಗಾಯಗೊಳಿಸಿದ ಮತ್ತು ಲಾಠಿ ಬೀಸಿ ತೀವ್ರ ಸ್ವರೂಪದ ಗಾಯಗೊಳಿಸಿದ ಪೊಲೀಸರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಬೇಕು, ಗೋಲಿಬಾರ್ ನಲ್ಲಿ ಮೃತಪಟ್ಟ ಜಲೀಲ್ ಮತ್ತು ನೌಶೀನ್ ಮೇಲಿನ ಪ್ರಕರಣ ಕೈ ಬಿಡಬೇಕು, ಅಮಾಯಕರ ಮೇಲೆ ದಾಖಲಿಸಿದ ಸುಳ್ಳು ಪ್ರಕರಣ ಕೈ ಬಿಡಬೇಕು, ಮೃತಪಟ್ಟ ಕುಟುಂಬಕ್ಕೆ ತಲಾ 25 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡಬೇಕು, ಘಟನೆಯನ್ನು ನೆಪವಾಗಿಟ್ಟುಕೊಂಡು ಮೊಬೈಲ್ ಟವರ್ ಆಧಾರದ ಮೇಲೆ ಕೇರಳದ ನಾಗರಿಕರಿಗೆ ವಿನಾಕಾರಣ ಕಿರುಕುಳ ನೀಡುವುದನ್ನು ತಕ್ಷಣ ನಿಲ್ಲಿಸಬೇಕು, ಅವರಿಗೆ ಪೊಲೀಸ್ ಇಲಾಖೆಯಿಂದ ಜಾರಿಗೊಳಿಸಲಾದ ನೊಟೀಸನ್ನು ರದ್ದುಗೊಳಿಸಬೇಕು, ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.
ಘಟನೆಯಲ್ಲಿ 29 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಕುಟುಂಬವೂ ಅತಂತ್ರವಾಗಿದೆ. ಪೊಲೀಸರು ಉದ್ದೇಶಪೂರ್ವಕವಾಗಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಡಿ.19ರ ಪ್ರಕರಣದಲ್ಲಿ ಜೈಲು ಸೇರಿರುವವರು ಜಾಮೀನು ಪಡೆದು ಹೊರಬರುವಷ್ಟರಲ್ಲಿ ಪೊಲೀಸರು ಬೇರೆ 7-8 ಪ್ರಕರಣ ದಾಖಲಿಸಿ ಮತ್ತೆ ಮತ್ತೆ ಅವರು ಜೈಲು ಸೇರುವಂತೆ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆಯ ಈ ಧೋರಣೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಜಲೀಲ್ ಕೃಷ್ಣಾಪುರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಫೋರಂನ ಸಹ ಸಂಚಾಲಕ ಮುಸ್ತಫಾ ಕೆಂಪಿ, ಸದಸ್ಯರಾದ ರಫೀಉದ್ದೀನ್ ಕುದ್ರೋಳಿ, ರಿಝ್ವಾನ್ ಎಚ್‌ಐಎಫ್, ಎಂಜಿ ಮುಹಮ್ಮದ್, ಅಥಾವುಲ್ಲಾ ಜೋಕಟ್ಟೆ, ಅಡ್ವಕೇಟ್ ಹನೀಫ್, ಸಿದ್ದೀಕ್ ತಲಪಾಡಿ, ಕಬೀರ್ ಉಳ್ಳಾಲ್, ಮೃತ ಜಲೀಲ್‌ರ ಸಹೋದರ ಯಹ್ಯಾ ಕಂದಕ್, ಮೃತ ನೌಶೀನ್‌ರ ಸಹೋದರ ನೌಫಾಲ್ ಕುದ್ರೋಳಿ ಉಪಸ್ಥಿತರಿದ್ದರು.








