ಫೆ.22-23: ಕೊಂಕಣಿ ಅಕಾಡಮಿಯ ಬೆಳ್ಳಿಹಬ್ಬ ಕಾರ್ಯಕ್ರಮ
ಮಂಗಳೂರು, ಫೆ.5: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಬೆಳ್ಳಿ ಹಬ್ಬದ ಕಾರ್ಯಕ್ರಮವು ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ಫೆ.22, 23ರಂದು ಬೆಳಗ್ಗೆ 8:30ರಿಂದ ರಾತ್ರಿ 9ರವರೆಗೆ ನಡೆಯಲಿದೆ.
ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 25 ಮಂದಿ ಕೊಂಕಣಿ ಭಾಷಿಗರಿಗೆ ಸನ್ಮಾನ, ಸಾಹಿತ್ಯ ಗೋಷ್ಠಿ, ಭಾಷಾ ಗೋಷ್ಠಿ, ಕವಿಗೋಷ್ಠಿ, ಸಂಸ್ಕೃತಿಗೋಷ್ಠಿ ನಡೆಯಲಿದೆ. ಅಲ್ಲದೆ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರವೂ ಜರುಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು ಭಾಗವಹಿಸಲಿದ್ದಾರೆ.
2019ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು
ಗೋಕುಲ್ ದಾಸ್ ಪ್ರಭು (ಸಾಹಿತ್ಯ): ಕೇರಳದಲ್ಲಿ ಜನಿಸಿದ್ದ ಇವರು ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದಾರೆ. 2001ರಲ್ಲಿ ಗೋವಾದಲ್ಲಿ ನಡೆದ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳಿಂದ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಸಲ್ಲಿಸುತ್ತಾ ಬಂದಿದ್ದರು. 2014ರಿಂದ 2018ರವರೆಗೆ ಅಖಿಲ ಭಾರತ ಕೊಂಕಣಿ ಪರಿಷತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕುಲ್ಅಗರ್, ಕೇರಳ ಸಾಹಿತ್ಯ ಅಕಾಡಮಿ ಪುರಸ್ಕಾರ, ಕೊಂಕಣಿ ಜನತಾ ಪ್ರಶಸ್ತಿ, ಡಾ ಟಿ.ಎಂ.ಎ ಪೈ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಆರ್ಗೋಡು ಮೋಹನ್ ದಾಸ್ ಶೆಣೈ (ಕಲೆ): ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಇವರು ಕಳೆದ 45 ವರ್ಷಗಳಿಂದ ಕೊಂಕಣಿ ಕಲಾ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನದಲ್ಲಿ ಕಲಾವಿದರಾಗಿ, ಸಾಹಿತಿಯಾಗಿ, ಗುರುವಾಗಿ ಸೇವೆ ಸಲ್ಲಿಸಿದ್ದಾರೆ. ಕೊಂಕಣಿಯಲ್ಲಿ ಹಲವು ಯಕ್ಷಗಾನ ಪ್ರಸಂಗ, ಪದ್ಯ ಸಾಹಿತ್ಯಗಳನ್ನು ರಚಿಸಿದ್ದರು. ಹಲವು ಯಕ್ಷಗಾನ ಪ್ರಸಂಗಗಳು ಕೊಂಕಣಿ ಭಾಷೆಯಲ್ಲಿ ಅನಾವರಣಗೊಂಡಿದೆ.
ವಿಷ್ಣು ಶಾಬು ರಾಣೆ (ಜಾನಪದ): ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಇವರು ಶಿಕ್ಷಕರಾಗಿ 40 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಗುಮಟೆಪಾಂಗ ವಾದ್ಯಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಈವರೆಗೆ 200ಕ್ಕೂ ಹೆಚ್ಚು ಯುವ ಕಲಾವಿದರಿಗೆ ತರಬೇತಿ ನೀಡಿದ್ದಾರೆ. ಕೊಂಕಣಿಯಲ್ಲಿ ಹಲವು ಪದ್ಯಗಳನ್ನು ರಚಿಸಿ ಅವುಗಳನ್ನು ಗುಮಟೆ ವಾದ್ಯದೊಂದಿಗೆ ಹಾಡಿ ಅನೇಕ ಕೊಂಕಣಿ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
2019ನೇ ಸಾಲಿನ ಪುಸ್ತಕ ಪುರಸ್ಕಾರ
ವೆಂಕಟೇಶ್ ನಾಯಕ್ ರಚಿಸಿದ ‘ವಾಟೇ ವಯಲೆಂ ರಗತ’ ಕವನ ಸಂಕಲನ, ಕ್ಲೆರನ್ಸ್ ಡೊನಾಲ್ಡ್ ಪಿಂಟೊರ ‘ಕಥಾಮೃತ್’ ಕಥಾ ಸಂಕಲನ, ಪಿಯುಸ್ ಪಿದಲಿಸ್ ಪಿಂಟೊರ ‘ಕೆನರಾಂತ್ ಪಾದ್ರೊವಾದೊ ಆನಿ ಪ್ರೊಪಗಾಂದಾಚೊ ವಿವಾದ್’ ಅಧ್ಯಯನ ಕೃತಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.







