ಫೆ.8- 10 : ಪರ್ಲಡ್ಕದಲ್ಲಿ "ಕಲೋಪಾಸನಾ-2020" ಕಾರ್ಯಕ್ರಮ
ವಿದ್ವಾನ್ ಸಂಜಯ್ ಸುಬ್ರಹ್ಮಣ್ಯನ್ ಚೆನ್ನೈರಿಂದ ಶಾಸ್ತ್ರೀಯ ಸಂಗೀತ
ಪುತ್ತೂರು; ನಗರದ ಪರ್ಲಡ್ಕದಲ್ಲಿರುವ ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಅರ್ಪಿಸುವ "ಕಲೋಪಾಸನಾ-2020" ಸಾಂಸ್ಕೃತಿಕ ಕಾರ್ಯಕ್ರಮ ಫೆ.8, 9 ಹಾಗೂ 10 ರಂದು ಪರ್ಲಡ್ಕ ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 15 ವರ್ಷಗಳ ನಿರಂತರವಾಗಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕಲೋಪಾಸನಾ ವೇದಿಕೆಯಲ್ಲಿ ಅನಾವರಣಗೊಳಿಸುತ್ತಾ ಬಂದಿದ್ದು, ಕರ್ನಾಟಕ ಸಂಗೀತ ಅಲ್ಲದೆ ತೆಂಕು, ಬಡಗು ಯಕ್ಷಗಾನ ಪ್ರದರ್ಶನವನ್ನೂ ಹಮ್ಮಿಕೊಳ್ಳುವ ಮೂಲಕ ಕಲಾಭಿಮಾನಿಗಳಿಗೆ ಸಂಗೀತದ ರಸದೌತಣ ನೀಡುವ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಫೆ.8 ಸಂಜೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕಲೋಪಾಸನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ವಿದ್ವಾನ್ ಸಂಜಯ್ ಸುಬ್ರಹ್ಮಣ್ಯನ್ ಚೆನ್ನೈ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದ್ದು, ವಯಲಿನ್‍ನಲ್ಲಿ ವಿದ್ವಾನ್ ಎಸ್.ವರದರಾಜನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ನೈವೇಲಿ ಬಿ.ವೆಂಕಟೇಶ್ ಚೆನ್ನೈ ಹಾಗೂ ಘಟಂನಲ್ಲಿ ವಿದ್ವಾನ್ ತ್ರಿಷ್ಪೂನಿತ್ತುರ ರಾಧಾಕೃಷ್ಣನ್ ಸಹಕರಿಸಲಿದ್ದಾರೆ. ಫೆ.9 ರಂದು ಸಂಜೆ ಬೆಂಗಳೂರು ಅನನ್ಯ ಕಲಾ ನಿಕೇತನದ ವತಿಯಿಂದ ಕರ್ನಾಟಕ ಕಲಾಶ್ರೀ ವಿದುಷಿ ಕೆ.ಬೃಂದಾ ಬೆಂಗಳೂರು ಅವರಿಂದ ಭರತನಾಟ್ಯ, ಫೆ.10ರ ಸಂಜೆ ಪೆರ್ಡೂರು ಮೇಳದವರಿಂದ "ಚಂದ್ರಹಾಸ" ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ರೂಪಲೇಖ, ಕಲಾಪೋಷಕರಾದ ವಿದ್ವಾನ್ ಕಾಂಚನ ಎ.ಈಶ್ವರ ಭಟ್ ಉಪಸ್ಥಿತರಿದ್ದರು.







