ಉಡುಪಿ: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸುರೇಶ್ ನಾಯಕ್ ಅಧಿಕಾರ ಸ್ವೀಕಾರ

ಉಡುಪಿ, ಫೆ.5: ಉಡುಪಿ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಸಾರಿಗೆ ಉದ್ಯಮಿ ಕುಯಿಲಾಡಿ ಸುರೇಶ್ ನಾಯ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಮೂರುವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮಟ್ಟಾರು ರತ್ನಾಕರ ಹೆಗ್ಡೆ, ನೂತನ ಅಧ್ಯಕ್ಷ ಕುಯಿಲಾಡಿ ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಇವರೊಂದಿಗೆ ಜಿಲ್ಲೆಯ ಆರು ಮಂಡಲಗಳ ಅಧ್ಯಕ್ಷರೂ ಜಿಲ್ಲಾಧ್ಯಕ್ಷರಿಂದ ಅಧಿಕಾರ ಸ್ವೀಕರಿಸಿದರು. ಅಧಿಕಾರ ಹಸ್ತಾಂತರಿಸಿದ ನಂತರ ಮಾತನಾಡಿದ ಮಟ್ಟಾರು, ಕಳೆದ ಗ್ರಾಪಂ, ತಾಪಂ, ಜಿಪಂ, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಫಲಿತಾಂಶ ಹಾಗೂ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆಯಿಂದ ಉಡುಪಿ ಜಿಲ್ಲಾ ಬಿಜೆಪಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಇದನ್ನು ದೇಶಕ್ಕೆ ಪ್ರಥಮ ಸ್ಥಾನಕ್ಕೇರಿಸುವ ಹೊಣೆ ನೂತನ ಜಿಲ್ಲಾಧ್ಯಕ್ಷರದು ಎಂದರು.
ಪ್ರಧಾನಿ ಮೋದಿ ಅವರು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿಯೂ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಸಿದ್ಧತೆಯಲ್ಲಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮಹಿಳಾ ಕಾರ್ಯಕರ್ತೆಯರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಮಟ್ಟಾರು ಅಭಿಪ್ರಾಯ ಪಟ್ಟರು.
ಬೈಂದೂರು ಶಾಸಕ ಬಿ.ಸುಕುಮಾರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿಶ್ರಾಂತಿ ಪಡೆಯುವಂತಿಲ್ಲ. ಶೀಘ್ರವೇ ಗ್ರಾಪಂ ಚುನಾವಣೆ ಬರುತ್ತಿವೆ. ಜಿಲ್ಲೆಯ ಗ್ರಾಪಂಗಳಲ್ಲಿ ಬಿಜೆಪಿಗೆ ಈಗಿರುವ ಸ್ಥಾನಗಳನ್ನು ಹೆಚ್ಚಿಸುವ ಸವಾಲು ಇವರ ಮುಂದಿದೆ ಎಂದರು.
ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಮಂಡಲದಿಂದ ಜಿಲ್ಲಾಧ್ಯಕ್ಷನಾಗುವವರೆಗೆ ಪಕ್ಷ ತನಗೆ ಅವಕಾಶ ಗಳನ್ನು ನೀಡಿದೆ. ಈ ಬಾರಿ ಜಿಲ್ಲಾಧ್ಯಕ್ಷನಾಗಲು ಸಾಕಷ್ಟು ಮಂದಿ ಅರ್ಹರು ಜಿಲ್ಲೆಯಲ್ಲಿದ್ದರು. ಆದರೂ ಪಕ್ಷ ತನಗೆ ಅವಕಾಶ ನೀಡಿದೆ. ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸುವುದು ತನ್ನ ಗುರಿಯಾಗಿದೆ ಎಂದರು.
ಜಿಪಂ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾಕೆ. ಶೆಟ್ಟಿ, ಮಂಗಳೂರು ವಿಭಾಗೀಯ ಪ್ರಭಾರಿ ಕೆ. ಉದಯಕುುಮಾರ್ ಶೆಟ್ಟಿ ವೇದಿಕೆಯಲ್ಲಿ ದ್ದರು. ನವೀನ್ ಶೆಟ್ಟಿ ಕುತ್ಯಾರು ಸ್ವಾಗತಿಸಿ, ಮನೋಹರ್ ವಂದಿಸಿದರು. ಗಿರೀಶ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.







