ಉಡುಪಿ: ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನ

ಉಡುಪಿ, ಫೆ. 5: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿ ದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ವದ ಯೋಜನೆಗಳ ಅರಿವು ಮೂಡಿಸುವ ‘ಸದೃಢ ಕರ್ನಾಟಕದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಸಮನ್ವಯ ಟ್ರಸ್ಟ್ ಶಿವಮೊಗ್ಗ ಇವರ ಸಹಯೋಗದಲ್ಲಿ ಬುಧವಾರ ಉಡುಪಿಯ ಸಿಟಿ ಬಸ್‌ನಿಲ್ದಾಣದಲ್ಲಿ ‘ಪೋಷಣ್ ಅಭಿಯಾನ, ಬಾಲ್ಯ ವಿವಾಹ, ಮಾತೃವಂದನ, ಭೇಟಿ ಬಾಚವೋ ಬೇಟಿ ಪಡಾವೋ’ ಬಗ್ಗೆ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಉಡುಪಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಅವರು ತಮಟೆ ಬಾರಿಸುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಆಶಾಲತಾ, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಉಡುಪಿ ನಗರ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಸಮನ್ವಯ ಕಲಾವಿದರಾದ ಲೋಕೇಶ್ ಭಕ್ತಿನಕಟ್ಟೆ, ಹನುಮಂತಪ್ಪ, ಆಶಾ, ರಾಮು, ಜ್ಯೋತಿ, ಅಶೋಕ್ ಕುಮಾರ್ ಬೀದಿ ನಾಟಕ ಪ್ರದರ್ಶಿಸಿ ದರು. ಕಾಪು ಬಸ್‌ನಿಲ್ದಾಣ, ಆದಿಉಡುಪಿ, ಹಿರಿಯಡ್ಕ ಬಸ್‌ನಿಲ್ದಾಣ, ಮಣಿಪಾಲ ಬಸ್‌ನಿಲ್ದಾಣಗಳಲ್ಲಿ ಬೀದಿನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





