ವಾಹನದ ಮೇಲೆ ಕಲ್ಲೆಸೆತ: ಕನ್ಹಯ್ಯ ಕುಮಾರ್ ಗೆ ಗಾಯ

Photo: Twitter(@ndtv)
ಪಾಟ್ನ, ಫೆ.5: ಜೆಎನ್ಯು ವಿದ್ಯಾರ್ಥಿ ಯೂನಿಯನ್ನ ಮಾಜಿ ಅಧ್ಯಕ್ಷ, ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಇತರರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಕಲ್ಲೆಸೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಘಟನೆಯಲ್ಲಿ ಕನ್ಹಯ್ಯ ಕುಮಾರ್ ಗಾಯಗೊಂಡಿದ್ದಾರೆ.
ಕಲ್ಲು ತೂರಾಟದಲ್ಲಿ ಹಲವು ವಾಹನಗಳ ಗಾಜು ಪುಡಿಯಾಗಿದೆ. ಈಗ ಸಿಪಿಐ ಪಕ್ಷ ಸೇರಿರುವ ಕನ್ನಯ್ಯ ಕುಮಾರ್ ಪಾಟ್ನದಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಸಹಾರ್ಸದತ್ತ ವಾಪಸಾಗುತ್ತಿದ್ದಾಗ ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಕಳೆದ 4 ದಿನದಲ್ಲಿ ಎರಡನೇ ಬಾರಿಗೆ ಕನ್ಹಯ್ಯ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲೆಸೆಯಲಾಗಿದೆ. ಶನಿವಾರ ಸರಾನ್ ಜಿಲ್ಲೆಯಲ್ಲಿಯೂ ಕನ್ಹಯ್ಯ ಕುಮಾರ್ ಬೆಂಗಾವಲು ವಾಹನಗಳಿಗೆ ಕಲ್ಲೆಸೆಯಲಾಗಿತ್ತು.
ಸಂವಿಧಾನ ರಕ್ಷಿಸಿ ಅಭಿಯಾನದಲ್ಲಿಯೂ ಸಕ್ರಿಯವಾಗಿರುವ ಕನ್ಹಯ್ಯ ಕುಮಾರ್, ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿಯ ಕಡು ವಿರೋಧಿಯಾಗಿದ್ದು ಕಳೆದ ಗುರುವಾರದಿಂದ ಕಾಂಗ್ರೆಸ್ನ ಶಕೀಲ್ ಅಹ್ಮದ್ಖಾನ್ ಜೊತೆಗೂಡಿ ವೆಸ್ಟ್ ಚಂಪಾರಣ್ನಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದಾರೆ.





