ಶ್ರೀನಗರ: ಚೆಕ್‌ಪೋಸ್ಟ್ ಮೇಲೆ ಉಗ್ರರ ದಾಳಿ: ಯೋಧ ಮೃತ್ಯು; ಇಬ್ಬರು ಉಗ್ರರ ಹತ್ಯೆ
ಶ್ರೀನಗರ, ಫೆ.5: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಂಚಾರಿ ತಪಾಸಣಾ ಕೇಂದ್ರದ ಮೇಲೆ ಬುಧವಾರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್‌ಪಿಎಫ್ ಯೋಧ ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಶ್ರೀನಗರದ ಹೊರವಲಯದ ಪಾರಂಪೋರ ವಲಯದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸಿಆರ್‌ಪಿಎಫ್ ಯೋಧರತ್ತ ಬೈಕಿನಲ್ಲಿ ಬಂದ ಮೂವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭ ಬಿಹಾರ ಮೂಲದ ಸಿಆರ್‌ಪಿಎಫ್ ಯೋಧ ರಮೇಶ್ ರಂಜನ್ ತೀವ್ರವಾಗಿ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ತಕ್ಷಣ ಯೋಧರು ಪ್ರತಿದಾಳಿ ನಡೆಸಿದ್ದು ಇಬ್ಬರು ಉಗ್ರರು ಹತರಾಗಿದ್ದರೆ ಗಾಯಗೊಂಡ ಮತ್ತೊಬ್ಬ ಉಗ್ರನನ್ನು ಸೆರೆ ಹಿಡಿಯಲಾಗಿದೆ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ.
ಫೆ.5ರಿಂದ 14ರ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಯೋಜನೆ ಹಾಕಿಕೊಂಡಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ರಾಜ್ಯದ ಹಲವೆಡೆ ಚೆಕ್‌ಪೋಸ್ಟ್ ಸ್ಥಾಪಿಸಿ ತಪಾಸಣಾ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.





