“ಅಲ್ಪಸಂಖ್ಯಾತರ ವಿರುದ್ಧದ ಬಿಜೆಪಿಯ ಪ್ರಚಾರ ಗೀತೆಗಳು ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುತ್ತಿವೆ”
ಚುನಾವಣಾ ಆಯೋಗಕ್ಕೆ ದೂರು

ಹೊಸದಿಲ್ಲಿ,ಫೆ.5: ಫೆ.8ರಂದು ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ ಪ್ರಚಾರ ಗೀತೆಗಳು ಮಾದರಿ ನೀತಿ ಸಂಹಿತೆಯನ್ನು ಮತ್ತು ಇತರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿವೆ ಎಂದು ಆರೋಪಿಸಿ ಚಿತ್ರನಿರ್ಮಾಪಕರು,ವಕೀಲರು ಮತ್ತು ಲೇಖಕರ ಗುಂಪೊಂದು ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಪ್ರಚಾರದ ವೀಡಿಯೊಗಳು ಸಮುದಾಯಗಳು ಮತ್ತು ವಿವಿಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿವೆ ಎಂದು ಹೇಳಿರುವ ದೂರು, ಆಕ್ಷೇಪಾರ್ಹ ವೀಡಿಯೊಗಳನ್ನು ತನ್ನೆಲ್ಲ ಸಾಮಾಜಿಕ ಜಾಲತಾಣ ಪೋರ್ಟಲ್‌ಗಳಿಂದ ಹಿಂದೆಗೆದುಕೊಳ್ಳುವಂತೆ ಮತ್ತು ಇನ್ನಷ್ಟು ಇಂತಹ ಅಥವಾ ಇತರ ವೀಡಿಯೊಗಳನ್ನು ಪೋಸ್ಟ್ ಮಾಡುವುದರಿಂದ ದೂರವಿರುವಂತೆ ಬಿಜೆಪಿಗೆ ಆದೇಶಿಸುವಂತೆ ಕೋರಿದೆ.
ವೀಡಿಯೊಗಳ ಸ್ಥೂಲ ವೀಕ್ಷಣೆಯೂ ಅವು ಶಾಹೀನ್‌ಬಾಗ್ ಮತ್ತು ಇತರೆಡೆಗಳಲ್ಲಿ ಸರಕಾರದ ಕೆಲವು ನೀತಿಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಮತ್ತು ಈ ಪ್ರತಿಭಟನೆಗಳನ್ನು ಬೆಂಬಲಿಸುತ್ತಿರುವ ಈ ಸಮುದಾಯೇತರರನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡಿವೆ ಎನ್ನುವದನ್ನು ತೋರಿಸುತ್ತಿದೆ ಎಂದು ಚಿತ್ರ ನಿರ್ಮಾಪಕರಾದ ಅಮಿತ್ ಮಹಂತಿ ಮತ್ತು ರುಚಿಕಾ ನೇಗಿ,ವಕೀಲರಾದ ಗಾಯತ್ರಿ ಸೈನಿ ಮತ್ತು ಶೊಮೊನಾ ಖನ್ನಾ ಹಾಗೂ ಲೇಖಕಿ ಪಾರ್ವತಿ ಶರ್ಮಾ ಅವರು ದೂರಿನಲ್ಲಿ ಬೆಟ್ಟು ಮಾಡಿದ್ದಾರೆ.
ವೀಡಿಯೊಗಳಲ್ಲಿ ಮುಸ್ಲಿಮ್ ಪುರುಷರು ಮತ್ತು ಮಹಿಳೆಯರನ್ನು ತೋರಿಸುವಾಗ ಪದೇ ಪದೇ ‘ಶಾಹೀನ್ ಬಾಗ್ ’ಶಬ್ದವನ್ನು ಬಳಸಲಾಗಿದೆ ಹಾಗೂ ಮುಸ್ಲಿಂ ಸಮುದಾಯ ಮತ್ತು ಅವರ ಮಿತ್ರರ ವಿರುದ್ಧ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ಭಾಷೆಯನ್ನೂ ಉಪಯೋಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಾಮಿಯಾ ಮಿಲ್ಲಿಯಾ ವಿವಿ ಮತ್ತು ಶಾಹೀನ್‌ಬಾಗ್‌ನಲ್ಲಿ ನಡೆದ ಮೂರು ಗುಂಡು ಹಾರಾಟ ಘಟನೆಗಳನ್ನು ದೂರಿನಲ್ಲಿ ಪ್ರಸ್ತಾಪಿಸಿರುವ ಅವರು,ಈ ವೀಡಿಯೊಗಳು ದಿಲ್ಲಿಯಲ್ಲಿ ಚುನಾವಣಾ ಪ್ರಚಾರ ಮತ್ತು ಚುನಾವಣಾ ವಾತಾವರಣದ ಮೇಲೆ ನೇರ ಪರಿಣಾಮವನ್ನಂಟು ಮಾಡಿವೆ ಎಂದು ಹೇಳಿದ್ದಾರೆ.







