ಮಣಿಪಾಲ: ಫೆ.9ಕ್ಕೆ 42 ಕಿ.ಮೀ.ಗಳ ಮಣಿಪಾಲ ಮ್ಯಾರಥಾನ್-2020
ಮಣಿಪಾಲ, ಫೆ.5: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ಆಯೋಜಿಸಿರುವ ‘ಮಣಿಪಾಲ ಮ್ಯಾರಥಾನ್-2020’ ಫೆ.9ರ ರವಿವಾರ ಮಣಿಪಾಲದಲ್ಲಿ ನಡೆಯಲಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲ ವಿವಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಣಿಪಾಲ ಮ್ಯಾರಥಾನ್‌ನ 4ನೇ ಅಧ್ಯಾಯದ ವಿವರಗಳನ್ನು ನೀಡಿದ ಅವರು, ಇದೇ ಮೊದಲ ಬಾರಿಗೆ ಈ ಮ್ಯಾರಥಾನ್ ಪೂರ್ಣಪ್ರಮಾಣದಲ್ಲಿ (42ಕಿ.ಮೀ.) ನಡೆಯಲಿದೆ. ಅಲ್ಲದೇ ಈ ಮಣಿಪಾಲ ಮ್ಯಾರಥಾನ್‌ಗೆ ‘ಅಸೋಸಿಯೇಷನ್ ಆಫ್ ಇಂಟರ್‌ನೇಷನಲ್ ಮ್ಯಾರಥಾನ್ಸ್ ಆ್ಯಂಡ್ ಡಿಸ್ಟೆನ್ಸ್ ರೇಸಸ್’ (ಎಐಎಂಎಸ್)ನಿಂದ ಮಾನ್ಯತೆಯೂ ದೊರೆತಿದೆ ಎಂದರು.
ಹೀಗಾಗಿ ಈ ಬಾರಿಯ ಫುಲ್ ಮ್ಯಾರಥಾನ್‌ಗೆ ಡಿ.9ರ ರವಿವಾರ ಮುಂಜಾನೆ 5:15ಕ್ಕೆ ಸರಿಯಾಗಿ ಮಣಿಪಾಲ ಎಜ್ಯು ಬಿಲ್ಡಿಂಗ್ ಎದುರು ಉದ್ಘಾಟನೆಗೊಳ್ಳಲಿದೆ. ಮುಂಬೈ ಐಸಿಐಸಿಐ ಬ್ಯಾಂಕ್‌ನ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಗಿರೀಶ್ ಸೆಹಗಲ್ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಡಾ.ಬಲ್ಲಾಳ್ ತಿಳಿಸಿದರು.
ಈ ಬಾರಿಯ ಮ್ಯಾರಥಾನ್‌ನ ಧ್ಯೇಯ ವಾಕ್ಯ ‘ಅಂಗಾಂಗಗಳ ದಾನ’. ಮ್ಯಾರಥಾನ್ ಮೂಲಕ ಅಂಗಾಂಗ ದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದರು. ಈವರೆಗೆ ಮಣಿಪಾಲ ಹಾಫ್ ಮ್ಯಾರಥಾನ್(21ಕಿ.ಮೀ.) ನಡೆಯುತಿದ್ದು, ಈ ಬಾರಿಯಿಂದ ಫುಲ್ ಮ್ಯಾರಥಾನ್ (42ಕಿ.ಮೀ.) ನಡೆಯಲಿದೆ. ಫುಲ್ ಮ್ಯಾರಥಾನ್‌ಗೆ ಈವರೆಗೆ ಕೆನ್ಯಾದ ಆರು ಮಂದಿ ಖ್ಯಾತನಾಮ ಸ್ಪರ್ದಿಗಳಲ್ಲದೇ, ಬ್ರಿಟನ್, ಶ್ರೀಲಂಕಾದಿಂದಲೂ ಸ್ಪರ್ಧಿಗಳು ಭಾಗವಹಿ ಸಲಿದ್ದು, ಈವರೆಗೆ 75 ಮಂದಿ ಸ್ಪರ್ಧಿಸಲು ಹೆಸರು ನೊಂದಾಯಿಸಿ ಕೊಂಡಿದ್ದಾರೆ ಎಂದರು.
ಅಲ್ಲದೇ ಹಾಫ್ ಮ್ಯಾರಥಾನ್‌ಗೆ 300 ಮಂದಿ, 10ಕಿ.ಮೀ. ಸ್ಪರ್ಧೆಗೆ 600 ಮಂದಿ, ಐದು ಕಿ.ಮೀ. ಸ್ಪರ್ಧೆಗೆ 1200 ಮಂದಿ ಹಾಗೂ 3ಕಿ.ಮೀ. ಸ್ಪರ್ಧೆಗೆ 7000 ಮಂದಿ ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದು, ಒಟ್ಟು ಸುಮಾರು ಹತ್ತು ಸಾವಿರ ಮಂದಿ ಈ ಬಾರಿಯ ಮಣಿಪಾಲ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಫುಲ್ ಮ್ಯಾರಥಾನ್ ವಿಜೇತ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳಿಗೆ ತಲಾ 50,000 ರೂ.ನಗದು ಬಹುಮಾನವಿದೆ. ನಂತರದ ಸ್ಥಾನಿಗಳಿಗೆ ಕ್ರಮವಾಗಿ 40ಸಾವಿರ, 30ಸಾವಿರ, 20 ಸಾವಿರ ಹಾಗೂ 10 ಸಾವಿರ ರೂ. ನಗದು ಬಹುಮಾನವಿದೆ. ಹಾಫ್ ಮ್ಯಾರಥಾನ್ ವಿಜೇತರಿಗೂ ಕ್ರಮವಾಗಿ 35 ಸಾವಿರ, 25 ಸಾವಿರ, 15ಸಾವಿರ ಹಾಗೂ 10 ಸಾವಿರ ರೂ.ಬಹುಮಾನ ವಿದೆ. ಅಲ್ಲದೇ 5ಕಿ.ಮೀ, 10ಕಿ.ಮೀ.ನ ವಿಜೇತರಿಗೂ ಆಕರ್ಷಕ ನಗದು ಬಹುಮಾನಗಳಿವೆ. ಫುಲ್ ಮ್ಯಾರಥಾನ್‌ನ್ನು ಪೂರ್ಣಗೊಳಿಸುವ ಮಾಹೆಯ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಬಹುಮಾನವಿದೆ.
ಈ ಬಾರಿ ಅಂಚೆ ಇಲಾಖೆ ‘ಮಣಿಪಾಲ ಮ್ಯಾರಥಾನ್ ಸ್ಪೆಷಲ್ ಕವರ್’ನ್ನು ಬಿಡುಗಡೆಗೊಳಿಸಲಿದೆ. ಬೆಂಗಳೂರಿನ ಕರ್ನಾಟಕ ಸರ್ಕಲ್ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ ಅವರು ಉದ್ಘಾಟನಾ ಸಮಾರಂಭ ದಲ್ಲಿ ಈ ಅಂಚೆ ಕವರನ್ನು ಬಿಡುಗಡೆಗೊಳಿಸಲಿದ್ದಾರೆ.
ಮುಂಜಾನೆ 5:15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭ ಹಾಗೂ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ನಾಡಿನ ಅನೇಕ ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಮಣಿಪಾಲ ಕಾರ್ನಿವಲ್‌ನ್ನು ಸಹ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರಿಗೂ ಆಕರ್ಷಣೀಯ ಕಾರ್ಯಕ್ರಮಗಳಿರುತ್ತವೆ ಎಂದು ಡಾ.ಬಲ್ಲಾಳ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಪ್ರೊ ವೈಸ್ ಚಾನ್ಸಲರ್ ಡಾ.ಪಿಎಲ್‌ಎನ್‌ಜಿ ರಾವ್, ಡಾ.ವಿನೋದ್ ನಾಯಕ್, ಡಾ.ಶೋಭಾ ಎಂ.ಇ, ಯುಡಿಎಎಎಯ ಬಾಲಕೃಷ್ಣ ಹೆಗ್ಡೆ, ರಘುರಾಮ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.







