ಸೋಂಕು ಬಚ್ಚಿಟ್ಟು, ರೋಗ ಹರಡುವವರಿಗೆ ಮರಣ ದಂಡನೆ: ಚೀನಾ ಅಧಿಕಾರಿಗಳ ಎಚ್ಚರಿಕೆ

ಬೀಜಿಂಗ್, ಫೆ. 5: ಚೀನಾವನ್ನು ಜರ್ಝರಿತಗೊಳಿಸಿರುವ ಮಾರಕ ಕೊರೋನವೈರಸ್ ಸೋಂಕನ್ನು ಹರಡುವವರ ವಿರುದ್ಧ ಮರಣ ದಂಡನೆ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ತಮ್ಮ ಸೋಂಕನ್ನು ಅಡಗಿಸಿಟ್ಟು, ಸಾರ್ವಜನಿಕ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ರೋಗ ಹರಡುವ ಕೊರೋನವೈರಸ್ ಸೋಂಕು ಬಾಧಿತರಿಗೆ ಮರಣ ದಂಡನೆ ವಿಧಿಸಬಹುದಾಗಿದೆ ಎಂದು ಅಧಿಕಾರಿಗಳು ಚೀನಾದ ಸರಕಾರಿ ಮಾಧ್ಯಮಗಳಿಗೆ ಹೇಳಿದ್ದಾರೆ.
2002-03ರಲ್ಲಿ ಕಾಣಿಸಿಕೊಂಡ ಸಾರ್ಸ್ ರೋಗದ ಅವಧಿಯಲ್ಲೂ, ಪ್ರತ್ಯೇಕವಾಸವನ್ನು ತಪ್ಪಿಸಿಕೊಂಡು ಸೋಂಕು ಹರಡುವವರಿಗೆ ಮರಣ ದಂಡನೆ ಅಥವಾ ಸುದೀರ್ಘ ಜೈಲುವಾಸದ ಶಿಕ್ಷೆಯನ್ನು ವಿಧಿಸುವುದಾಗಿ ಚೀನಾ ಬೆದರಿಸಿತ್ತು.
‘ಸಾಮಾಜಿಕ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ’ ಕೊರೋನವೈರಸ್ ಸಂಬಂಧಿ ಅಪರಾಧಗಳಲ್ಲಿ ತೊಡಗುವವರಿಗೆ ಮರಣ ದಂಡನೆ ನೀಡುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಚೀನಾದ ಆಂತರಿಕ ಭದ್ರತಾ ಸಚಿವಾಲಯ ಹಾಗೂ ಎಲ್ಲ ಹಂತಗಳ ಸ್ಥಳೀಯ ಸರಕಾರಗಳು ಪಣತೊಟ್ಟಿವೆ.
ಸೋಂಕಿನ ಬಗ್ಗೆ ಗಾಳಿಸುದ್ದಿಗಳನ್ನು ಹರಡುವುದು, ‘ಸರಕಾರದ ಸಾಮರ್ಥ್ಯವನ್ನು ಬುಡಮೇಲುಗೊಳಿಸುವುದಾಗಿದೆ ಹಾಗೂ ಅದಕ್ಕೆ ತಕ್ಷಣದ ಮತ್ತು ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಅತಿ ಸೋಂಕು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಇತಿಹಾಸವುಳ್ಳ ಸೋಂಕು ಪೀಡಿತ ವ್ಯಕ್ತಿಗಳು, ತಮ್ಮ ಕಾಯಿಲೆಯನ್ನು ಮುಚ್ಚಿಟ್ಟರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಒಂದು ವೇಳೆ ಅವರು ಮರಣ ದಂಡನೆಯಿಂದ ಪಾರಾದರೂ, 15 ವರ್ಷಗಳ ಜೈಲು ಶಿಕ್ಷೆಯನ್ನಾದರೂ ಅನುಭವಿಸಬೇಕಾಗುತ್ತದೆ.







