ಕೇರಳ: ನಳ್ಳಿಯಲ್ಲಿ ನೀರಿನ ಬದಲು ಸಾರಾಯಿ !
ತಿರುವನಂತಪುರಂ, ಫೆ.5: ಕೇರಳದ ತ್ರಿಶೂರ್ ಜಿಲ್ಲೆಯ ಚಾಲಕುಡಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿಕ ಫ್ಲಾಟ್‌ನ ನಿವಾಸಿಗಳಿಗೆ ನಳ್ಳಿಯಲ್ಲಿ ನೀರಿನ ಬದಲು ಸಾರಾಯಿ ಪೂರೈಕೆಯಾದ ಘಟನೆ ವರದಿಯಾಗಿದೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಂತೆ, ಚಾಲಕುಡಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿ ಇರುವ ಸೊಲೊಮನ್ಸ್ ಅವೆನ್ಯೂ ಫ್ಲಾಟ್‌ನ ನಿವಾಸಿಗಳು ತಮಗೆ ಪೂರೈಕೆಯಾದ ನಳ್ಳಿನೀರಿನ ವಾಸನೆ ಮತ್ತು ರುಚಿ ಸಾರಾಯಿಯಂತಿದೆ ಎಂದು ದೂರಿದ್ದಾರೆ. ಇದರಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಕೆಲ ವರ್ಷಗಳ ಹಿಂದೆ ಸಮೀಪದ ಬಾರ್‌ನಿಂದ ಅಬಕಾರಿ ಅಧಿಕಾರಿಗಳು ಸುಮಾರು 6 ಸಾವಿರ ಲೀಟರ್‌ನಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದು ಕೆಲ ದಿನದ ಹಿಂದೆ ಗುಂಡಿ ತೋಡಿ ಮದ್ಯದ ಬಾಟಲಿಗಳನ್ನು ಹುಗಿದಿದ್ದ ವಿಷಯ ತಿಳಿದಿದೆ.
ಈ ಗುಂಡಿಯ ಬಳಿಯಲ್ಲೇ ತೆರೆದ ಬಾವಿಯಿದ್ದು , ಬಾವಿಗೆ ಪೂರೈಕೆಯಾಗುವ ಅಂತರ್ಜಲದೊಂದಿಗೆ ಸಾರಾಯಿಯೂ ಬೆರೆತಿದೆ. ಈ ಬಾವಿಯಿಂದ ಸಮೀಪದ ಪ್ರದೇಶಗಳಿಗೆ ನೀರು ಪೂರೈಕೆಯಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.





