ಚುನಾವಣಾ ಆಯುಕ್ತ ಲವಾಸಾರ ಕುಟುಂಬ ಮನೆ ನಿರ್ಮಾಣಕ್ಕೆ ಕಪ್ಪುಹಣ ಪಾವತಿಸಿತ್ತು: ಆದಾಯ ತೆರಿಗೆ ಇಲಾಖೆ

ಹೊಸದಿಲ್ಲಿ,ಫೆ.5: ಚುನಾವಣಾ ಆಯುಕ್ತ ಅಶೋಕ ಲವಾಸಾರ ಕುಟುಂಬ ಸದಸ್ಯರು ಗುರುಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಕಪ್ಪುಹಣವನ್ನು ಬಳಸಿದ್ದರು ಮತ್ತು ನೋಟು ನಿಷೇಧದ ಬಳಿಕ ಬ್ಯಾಂಕ್ ಖಾತೆಗಳಲ್ಲಿ ಸುಮಾರು ಐದು ಲಕ್ಷ ರೂ.ಗಳನ್ನು ಜಮಾ ಮಾಡಿದ್ದರು ಎಂದು ಆದಾಯ ತೆರಿಗೆ ಇಲಾಖೆಯು ಆರೋಪಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ಬುಧವಾರ ವರದಿ ಮಾಡಿದೆ. ಇಲಾಖೆಯು 2019,ನವೆಂಬರ್‌ನಲ್ಲಿ ಕಂದಾಯ ಇಲಾಖೆಯೊಂದಿಗೆ ಹಂಚಿಕೊಂಡಿರುವ ವರದಿಯಲ್ಲಿ ಲವಾಸಾ ಕುಟುಂಬ ಸದಸ್ಯರ ವಿರುದ್ಧದ ಆರೋಪಗಳ ಸರಣಿಯಲ್ಲಿ ಇತ್ತೀಚಿನದಾಗಿರುವ ಈ ಆರೋಪವನ್ನು ಮಾಡಿದೆ.
ಮೊದಲ ಆರೋಪವು ಗುರುಗ್ರಾಮದಲ್ಲಿಯ ಲವಾಸಾ,ಅವರ ಪತ್ನಿ ನಾವೆಲ್ ಲವಾಸಾ,ಸೋದರಿ ಶಕುಂತಲಾ,ಪುತ್ರ ಅಬಿರ್ ಮತ್ತು ಪುತ್ರಿ ಅವ್ನಿ ಅವರ ಜಂಟಿ ಒಡೆತನದ ನಾಲ್ಕು ಅಂತಸ್ತುಗಳ ಕಟ್ಟಡಕ್ಕೆ ಸಂಬಂಧಿಸಿದೆ. ಕಟ್ಟಡ ನಿರ್ಮಾಣಕ್ಕೆ ನಗದು ಹಣವನ್ನು ಪಾವತಿಸಿಲ್ಲ ಎಂದು ನಾವೆಲ್ ಹೇಳಿಕೊಂಡಿದ್ದರಾದರೂ 46.65 ಲ.ರೂ.ಕಪ್ಪುಹಣವನ್ನು ನಗದಾಗಿ ಪಾವತಿಸಲಾಗಿತ್ತು ಎನ್ನುವುದನ್ನು ಸಾಕ್ಷಾಧಾರಗಳು ತಿಳಿಸಿವೆ ಎಂದು ಇಲಾಖೆಯು ಪ್ರತಿಪಾದಿಸಿದೆ. ನಿರ್ಮಾಣ ಸಂಸ್ಥೆಯ ಮಾಲಿಕನ ಕಚೇರಿ ಮತ್ತು ಮನೆಯ ಮೇಲೆ 2019,ಆಗಸ್ಟ್‌ನಲ್ಲಿ ನಡೆಸಿದ್ದ ದಾಳಿಗಳ ವೇಳೆ ಈ ಸಾಕ್ಷಾಧಾರಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಕುಟುಂಬಕ್ಕೆ ಸೇರದ ವ್ಯಕ್ತಿಗಳು ನಿರ್ಮಾಣ ಸಂಸ್ಥೆಗೆ 16.5 ಲ.ರೂ.ಗಳನ್ನು ಪಾವತಿಸಿದ್ದನ್ನು ತೆರಿಗೆ ಇಲಾಖೆಯು ಪತ್ತೆ ಹಚ್ಚಿದ್ದು,ಈ ಪೈಕಿ 9.57 ಲ.ರೂ.ಗಳನ್ನು ಲವಾಸಾರ ಮನೆಗೆಲಸದ ಆಳು ಪಾವತಿಸಿದ್ದ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ತಾನು ಕಟ್ಟಡ ನಿರ್ಮಾಣಕ್ಕಾಗಿ 2.5 ಕೋ.ರೂ.ನಿಂದ 2.7 ಕೋ.ರೂ.ಗಳನ್ನು ಬ್ಯಾಂಕ್ ಖಾತೆಯ ಮೂಲಕ ಮಾತ್ರವೇ ಪಾವತಿಸಿದ್ದಾಗಿ ನಾವೆಲ್ 2019,ಸೆ.9ರಂದು ಇಲಾಖೆಗೆ ತಿಳಿಸಿದ್ದರು. ಮನೆಗೆಲಸದ ಆಳು ಕುಟುಂಬದ ಪರವಾಗಿ ಹಣ ಪಾವತಿಸಿದ್ದನ್ನೂ ಅವರು ನಿರಾಕರಿಸಿದ್ದರು. ಆದರೆ ಆತ ತನ್ನ ಪುತ್ರನಿಗೆ 9.57 ಲ.ರೂ.ಗಳ ವೈಯಕ್ತಿಕ ಸಾಲವನ್ನು ನೀಡಿದ್ದ ಎಂದು ಸೆ.25ರಂದು ಅಧಿಕಾರಿಗಳಿಗೆ ಆಕೆ ತಿಳಿಸಿದ್ದರು.
ಅಬಿರ್ ತನ್ನ ತೆರಿಗೆ ರಿಟರ್ನ್‌ನಲ್ಲಿ ಇಂತಹ ಸಾಲವನ್ನು ಉಲ್ಲೇಖಿಸಿರಲಿಲ್ಲ ಮತ್ತು ಆ ಸಂದರ್ಭದಲ್ಲಿ ತಾಯಿ -ಮಗನ ಬ್ಯಾಂಕ್ ಖಾತೆಗಳಲ್ಲಿ ಸಾಕಷ್ಟು ಹಣವಿತ್ತಾದ್ದರಿಂದ ಸಾಲ ಪಡೆಯುವ ಅಗತ್ಯವೂ ಇರಲಿಲ್ಲ ಎನ್ನುವುದು ಕಂಡು ಬಂದಿದೆ ಎಂದಿರುವ ವರದಿಯು, ನಾವೆಲ್ ಸುಳ್ಳು ಹೇಳಿಕೆಯನ್ನು ನೀಡಿದ್ದರು ಎಂದು ಆರೋಪಿಸಿದೆ.







