ಸಿಎಎ, ಎನ್‌ಆರ್‌ಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ಭಾರತದ ಈ ಗ್ರಾಮ

ಅಹ್ಮದಾನಗರ (ಮಹಾರಾಷ್ಟ್ರ), ಫೆ. 5: ಅಹ್ಮದಾನಗರ ಪಟ್ಟಣದ ಹೊರವಲಯದಲ್ಲಿರುವ ಇಸ್ಲಾಕ್ ಹೆಸರಿನ ಪುಟ್ಟ ಗ್ರಾಮ ಬುಧವಾರ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಿರ್ಣಯ ಅಂಗೀಕರಿಸಿದೆ.
ಸುಮಾರು 2000 ಜನಸಂಖ್ಯೆ ಇರುವ ಈ ಗ್ರಾಮದ ಸಭೆಯ ಸಂದರ್ಭ ನಿರ್ಣಯ ಮಂಡಿಸಿದ ಗ್ರಾಮಸ್ತ ಮಹಾದೇವ್ ಗಾವ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಕೇಂದ್ರ ಸರಕಾರ ಹಿಂದೆಗೆಯದೇ ಇದ್ದರೆ, ಅಸಹಕಾರ ಚಳವಳಿ ಆರಂಭಿಸಲಿದ್ದೇವೆ ಎಂದರು. ಇಲ್ಲಿನ 2000 ಜನರಲ್ಲಿ ಶೇ. 45 ಜನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದುರ್ಬಲ ವರ್ಗಕ್ಕೆ ಸೇರಿದವರು. ಅವರಲ್ಲಿ ಪೌರತ್ವ ಸಾಬೀತುಪಡಿಸಲು ದಾಖಲೆಗಳು ಇಲ್ಲ. ನೂತನ ಕಾನೂನಿನಲ್ಲಿ ಬದಲಾವಣೆ ತರಲು ನಾವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಕಾಯ್ದೆಯಲ್ಲಿ ಬದಲಾವಣೆ ತರದೇ ಇದ್ದರೆ, ನಾವು ಅಸಹಾಕಾರ ಚಳವಳಿ ಆರಂಭಿಸಲಿದ್ದೇವೆ ಎಂದು ಅವರು ತಿಳಿಸಿದರು. ಇಲ್ಲಿನ ಹೆಚ್ಚಿನ ಜನರು ಬುಡಕಟ್ಟುಗಳಿಗೆ ಸೇರಿದವರು. ಅವರಲ್ಲಿ ಜಾತಿ ಪ್ರಮಾಣ ಪತ್ರ ಕೂಡ ಇಲ್ಲ. ಅವರಿಗೆ ಸರಕಾರದ ಸೌಲಭ್ಯ ಪಡೆಯಲು ಕೂಡ ಸಾಧ್ಯವಾಗುವುದಿಲ್ಲ. ನಾವೆಲ್ಲರು ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ನಿರ್ಣಯಕ್ಕೆ ಒಪ್ಪಿಗೆ ನೀಡಿದ್ದೇವೆ. ಈ ಜನರಿಗೆ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಲಾರದು ಎಂದು ಗ್ರಾಮ ಪಂಚಾಯತ್ ಸದಸ್ಯ ಯೋಗೇಶ್ ಜೆರಾಂಗ್ ತಿಳಿಸಿದ್ದಾರೆ.





