ಕಿಶೋರ್ ಕುಮಾರ್ ಅಭಿನಯದ ನಿಷೇಧಿತ ಚಿತ್ರದ ರೀಲ್ 60 ವರ್ಷಗಳ ಬಳಿಕ ಪತ್ತೆ

ಹೊಸದಿಲ್ಲಿ,ಫೆ.5: 1957ರಲ್ಲಿ ನಿಷೇಧಿಸಲ್ಪಟ್ಟಿದ್ದ ಕಿಶೋರ್‌ಕುಮಾರ್ ಅಭಿನಯದ ‘ಬೆಗುನಾಹ್’ ಚಿತ್ರದ ರೀಲೊಂದು ರಾಷ್ಟ್ರೀಯ ಸಿನೆಮಾ ಸಂಗ್ರಹಗಾರದಲ್ಲಿ ಪತ್ತೆಯಾಗಿದೆ. ಈ ಚಿತ್ರದ ಎಲ್ಲಾ ಪ್ರತಿಗಳನ್ನು ಸುಟ್ಟು ಹಾಕಲು ಬಾಂಬೆ ಹೈಕೋರ್ಟ್ ಆದೇಶ ನೀಡಿದ್ದ 60 ವರ್ಷಗಳ ಬಳಿಕ ಅದರ ಪ್ರತಿ ಪತ್ತೆಯಾಗಿದೆ.
ಈ ಅಪೂರ್ವ ಚಿತ್ರದ ತುಣುಕೊಂದು ಕಳೆದ ವಾರ ಲಭ್ಯವಾಗಿದ್ದು, ಅದರಲ್ಲಿ ಸಂಗೀತ ನಿರ್ದೇಶಕ ಜೈಕಿಶನ್ (ಶಂಕರ್-ಜೈಕಿಶನ್ ಖ್ಯಾತಿಯ ) ಅವರು ಪಿಯಾನೊ ನುಡಿಸುತ್ತಿರುವುದನ್ನು ಹಾಗೂ ಹಳೆಯ ಕಾಲದ ನಟಿ ಶಕೀಲಾ ನೃತ್ಯ ಮಾಡುತ್ತಿರುವುದನ್ನು ಹಾಗೂ ಹಿನ್ನೆಲೆ ಗಾಯಕ ಮುಖೇಶ್ ತನ್ಮಯತೆಯಿಂದ ‘ಯೆ ಪ್ಯಾಸಿ ದಿಲ್ ಬೆಝುಬಾನ್) ಹಾಡನ್ನು ಹಾಡುತ್ತಿರುವುದನ್ನು ತೋರಿಸಲಾಗಿದೆ.
‘‘ ಈ ಚಿತ್ರದ ರೀಲ್‌ಗಾಗಿ ಹಲವಾರು ಮಂದಿ ಹುಡುಕಾಡುತ್ತಿದ್ದರೂ, ಅದು ನಮಗೆ ಸಿಕ್ಕಿರಲಿಲ್ಲ. ನಾವು ಕೂಡಾ ಅತ್ಯಂತ ಸಕ್ರಿಯರಾಗಿ ಅದರ ಶೋಧ ನಡೆಸಿದ್ದೆವು. ಈ ಚಿತ್ರದ ರೀಲ್ ಸಿಕ್ಕಿರುವುದೇ ದೊಡ್ಡ ಪವಾಡ’ ಎಂದು ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಗಾರ (ಎನ್‌ಎಫ್‌ಎಐ)ದ ನಿರ್ದೇಶಕ ಪ್ರಕಾಶ್ ಮಾಗುಡಮ್ ತಿಳಿಸಿದ್ದಾರೆ.
1957ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದ ವಿರುದ್ಧ ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ಪ್ಯಾರಾಮೌಂಟ್ ಪಿಕ್ಚರ್ಸ್ ಅಮೆರಿಕಾ, ಕಾಪಿರೈಟ್ ಉಲ್ಲಂಘನೆಯ ಆರೋಪ ಹೊರಿಸಿತ್ತು ಬೆಗುನಾಹ್ ಚಿತ್ರವು, 1954ರಲ್ಲಿ ಬಿಡುಗಡೆಗೊಂಡ , ತನ್ನ ನಿರ್ಮಾಣದ ಹಾಲಿವುಡ್ ಚಿತ್ರ ‘‘ ನೊಕ್ ಆನ್ ವುಡ್’ನ ನಕಲಿ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಕಾನೂನು ಸಮರದಲ್ಲಿ ಚಿತ್ರದ ಕಾಪಿರೈಟ್ ಹಕ್ಕುಗಳನ್ನು ಪ್ಯಾರಾಮೌಂಟ್ ಪಿಕ್ಚರ್ಸ್ ಗೆದ್ದುಕೊಂಡಿತ್ತು ಹಾಗೂ ಬೆಗುನಾಹ್ ಚಿತ್ರದ ಎಲ್ಲಾ ಪ್ರತಿಗಳನ್ನು ಸುಟ್ಟುಹಾಕಬೇಕೆಂದು ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು.
ನ್ಯಾಯಾಲಯದ ಆದೇಶದ ಬಳಿಕ ಚಿತ್ರದ ಎಲ್ಲಾ ಪ್ರತಿಗಳನ್ನು ಸುಟ್ಟು ಹಾಕಲಾಗಿತ್ತೆಂದು ನಂಬಲಾಗಿತ್ತು. ಆದರೆ ಕೆಲವು ಪ್ರಿಂಟ್‌ಗಳು ಎಲ್ಲೋ ಬೇರೆಡೆ ಇದ್ದಿದ್ದರಿಂದ ಅವು ನಾಶಗೊಳ್ಳದೆ ಉಳಿದಿದ್ದವು. ಭಾರತದಲ್ಲಿನ ಸಿನೆಮಾ ಪ್ರೇಮಿಗಳಿಂದ ಈ ಚಿತ್ರದ ಪ್ರತಿಯನ್ನು ನಾವು ಪಡೆದುಕೊಂಡೆವು ಎಂದು ಪ್ರಕಾಶ್ ಮಾಗ್ದಮ್ ತಿಳಿಸಿದ್ದಾರೆ.
ಜೈಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ ಏಕೈಕ ಸಿನೆಮಾ ಇದಾಗಿರುವುದರಿಂದ ಸಂಗೀತ ನಿರ್ದೇಶಕ ಜೋಡಿಯ ಅಭಿಮಾನಿಗಳು ಈ ಚಿತ್ರದ ತುಣುಕಿಗಾಗಿ ಶೋಧಿಸುತ್ತಿದ್ದರೆಂದು ಅವರು ಹೇಳಿದರು.
ಕಿಶೋರ್‌ಕುಮಾರ್ ಅಭಿನಯದ ಬೆಗುನಾಹದ 60ರಿಂದ 70 ನಿಮಿಷಗಳ ಅವಧಿಯ ಎರಞು 16 ಎಂಎಂ ರೀಲ್‌ಗಳು ನಮ್ಮ ಬಳಿಯಿವೆ ಒಂದು ರೀಲ್ ಎರಡು ತಿಂಗಳುಗಳ ಹಿಂದೆ ದೊರೆತಿದ್ದರೆ, ಇನ್ನೊಂದು ಕಳೆದ ವಾರ ಲಭ್ಯವಾಗಿದೆ.
ಲಭ್ಯವಾಗಿರುವ ಹಾಡಿನ ರೀಲ್ ಉತ್ತಮ ಸ್ಥಿತಿಯಲ್ಲಿಲ್ಲವಾದರೂ, ಅದನ್ನು ವೀಕ್ಷಿಸಲು ಸಾಧ್ಯವಾಗುತ್ದದೆ ಎಂದು ಪ್ರಕಾಶ್ ತಿಳಿಸಿದರು.







