ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಮಧ್ಯಪ್ರದೇಶ ಸಂಪುಟ
ಭೋಪಾಲ್, ಫೆ. 5: ಮಧ್ಯಪ್ರದೇಶ ಸಂಪುಟ ಬುಧವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರವನ್ನು ಕೋರಿದೆ. ಈ ಕಾಯ್ದೆ ಸಂವಿಧಾನದ ಜಾತ್ಯತೀತ ವಿನ್ಯಾಸಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದೆ. ಮುಖ್ಯಮಂತ್ರಿ ಕಮಲ್‌ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಸಂದರ್ಭ ಈ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಪಿ.ಸಿ. ಶರ್ಮಾ ತಿಳಿಸಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತವಿದೆ. ಕೇರಳ, ಪಂಜಾಬ್, ರಾಜಸ್ಥಾನ ಹಾಗೂ ಪಶ್ಚಿಮಬಂಗಾಳದಲ್ಲಿ ಈ ಕಾಯ್ದೆ ವಿರುದ್ಧ ಈಗಾಗಲೇ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಿಎಎ ಭಾರತೀಯ ಸಂವಿಧಾನದ ಜಾತ್ಯತೀತ ವಿನ್ಯಾಸಕ್ಕೆ ವಿರುದ್ಧವಾಗಿರುವುದರಿಂದ ಹಾಗೂ ಜನರನ್ನು ಧಾರ್ಮಿಕ ಆಧಾರದಲ್ಲಿ ವಿಭಾಗಿಸುವುದರಿಂದ ಮಧ್ಯಪ್ರದೇಶ ಸಂಪುಟ ಈ ನಿರ್ಣಯ ಅಂಗೀಕರಿಸಿದೆ ಎಂದು ಶರ್ಮಾ ಹೇಳಿದ್ದಾರೆ. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಜಾತ್ಯತೀತ ವಿನ್ಯಾಸ ಹಾಗೂ ಸಹಿಷ್ಣು ಸ್ವಭಾವಕ್ಕೆ ಅಪಾಯ ಉಂಟು ಮಾಡಿದೆ ಎಂದು ಶರ್ಮಾ ಹೇಳಿದ್ದಾರೆ. ಜಾತ್ಯತತೀತೆ ಭಾರತೀಯ ಸಂವಿಧಾನದ ಮೂಲ ಅಡಿಪಾಯ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತ ಜಾತ್ಯತೀತ ರಾಷ್ಟ್ರ ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಅವರು ತಿಳಿಸಿದರು.
ಇದಲ್ಲದೆ, ಸಂವಿಧಾನದ ಕಲಂ 14 ಕಾನೂನು ಅಡಿಯಲ್ಲಿ ಎಲ್ಲ ನಾಗರಿಕರು ಸಮಾನರು ಎಂದು ಹೇಳುತ್ತದೆ ಎಂದು ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂದೆ ತೆಗೆದುಕೊಳ್ಳುವುದು ಮಾತ್ರವಲ್ಲ, ಈ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಸಂಶಯಗಳನ್ನು ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.





