ವಿಪತ್ತು ನಿರ್ವಹಣಾ ಕಾಯ್ದೆ ಅನುಷ್ಠಾನ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಫೆ.5: ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ದೃಷ್ಟಿಯಿಂದ ವಿಸ್ತಾರವಾಗಿ ಆದೇಶ ಹೊರಡಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಈ ಕುರಿತು ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಸರಕಾರದ ಪರವಾಗಿ ವಾದ ಮಂಡಿಸಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಮುಖ್ಯಮಂತ್ರಿ ನೇತೃತ್ವದ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ 2019ರಲ್ಲಿ ಕೇವಲ ಎರಡು ಸಭೆಗಳನ್ನು ನಡೆಸಿರುವುದು, ಮುಖ್ಯ ಕಾರ್ಯದರ್ಶಿ ನೇತೃತ್ವದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಕಳೆದ 15 ವರ್ಷಗಳಲ್ಲಿ ಕೇವಲ 14 ಸಭೆಗಳನ್ನು ನಡೆಸಿರುವುದು ಮತ್ತು 2017 ಮತ್ತು 2018ರಲ್ಲಿ ಜಿಲ್ಲಾ ಪ್ರಾಧಿಕಾರ ಮತ್ತು ಸಮಿತಿಗಳು ಇಡೀ ವರ್ಷದಲ್ಲಿ ಒಂದೆರಡು ಸಭೆಗಳನ್ನು ನಡೆಸಿರುವ ಅಂಶವನ್ನು ನ್ಯಾಯಪೀಠ ಪ್ರಮಾಣ ಪತ್ರದಲ್ಲಿ ಗಮನಿಸಿತು.
ಅದಕ್ಕೆ, ಈ ರೀತಿಯ ಕಾರ್ಯವೈಖರಿಯಿಂದ ಕಾಯ್ದೆಯ ಅನುಷ್ಠಾನ ಪರಿಣಾಮಕಾರಿ ಆಗುವುದಿಲ್ಲ. ಹೀಗಾಗಿ, ಸರಕಾರಕ್ಕೆ ಸಮರ್ಪಕವಾದ ನಿರ್ದೇಶನಗಳನ್ನು ನೀಡಲು ವಿಸ್ತಾರವಾದ ಆದೇಶ ನೀಡಬೇಕಾಗುತ್ತದೆ. ಹೀಗಾಗಿ, ಕಾಯ್ದೆ ಜಾರಿಗೆ ಬಂದಾಗಿನಿಂದ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ, ಜಿಲ್ಲಾ ಮಟ್ಟದ ಪ್ರಾಧಿಕಾರ ಮತ್ತು ಸಮಿತಿಗಳು ಎಷ್ಟು ಸಭೆಗಳನ್ನು ನಡೆಸಿವೆ ಎಂಬ ಬಗ್ಗೆ ದಿನಾಂಕಗಳ ಸಮೇತ ವರ್ಷವಾರು ವಿವರಗಳನ್ನು ಒದಗಿಸುವಂತೆ ನ್ಯಾಯಪೀಠ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.
ಅಲ್ಲದೇ, ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ನೀತಿ ಅಂತಿಮಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸೂಚನೆ ನೀಡಿದ ನ್ಯಾಯಪೀಠ, ಮಾ.4ರೊಳಗೆ ಈ ಕುರಿತ ಅನುಪಾಲನಾ ವರದಿ ಸಲ್ಲಿಸುವಂತೆ ಹೇಳಿ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿತು.







