ಬೆಂಗಳೂರು: ವಾಲಿದ ನಾಲ್ಕು ಅಂತಸ್ತಿನ ಪಿಜಿ ಕಟ್ಟಡ: ಸ್ಥಳೀಯರಲ್ಲಿ ಆತಂಕ
ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ
ಬೆಂಗಳೂರು, ಫೆ.5: ನಗರದ ಕೆಂಪಾಪುರದ ವಾಯುನಂದನ ಲೇಔಟ್‌ನಲ್ಲಿನ ನಾಲ್ಕು ಅಂತಸ್ತಿನ ಪಿಜಿ ಕಟ್ಟಡ ವಾಲಿದ್ದು, ಅಕ್ಕಪಕ್ಕದ 35 ಕಟ್ಟಡಗಳಲ್ಲಿ ನೆಲೆಸಿದ್ದ ನಿವಾಸಿಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ.
ಸ್ಥಳಕ್ಕೆ ಬಿಬಿಎ.ಪಿ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಜಂಟಿ ಆಯುಕ್ತ ಅಶೋಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಾಲ್ಕು ಅಂತಸ್ತಿನ ಕಟ್ಟಡವು ಪಿಜಿ ಕಟ್ಟಡವಾಗಿದ್ದು, ಬುಧವಾರ ಬೆಳಗ್ಗೆ 8:30ರ ವೇಳೆಗೆ ವಾಲಿಕೊಂಡಿದ್ದು, ಈ ಕಟ್ಟಡದ ಹಿಂಭಾಗದಲ್ಲಿ ಮನೆ ಕಟ್ಟಲು ಎಂಟು ಅಡಿ ಆಳದ ಹಳ್ಳ ತೆಗೆದಿರುವುದೇ ಕಟ್ಟಡ ವಾಲಲು ಕಾರಣ ಎಂದು ತಿಳಿದು ಬಂದಿದೆ.
ವಾಲಿದ ಕಟ್ಟಡದ ಸುತ್ತಮುತ್ತಲಿನ 35ಕ್ಕೂ ಹೆಚ್ಚು ಕಟ್ಟಡಗಳಿಂದ ಸ್ಥಳಾಂತರ ಮಾಡಲಾಗಿರುವ ಜನರನ್ನು ಇದೀಗ ತಾತ್ಕಾಲಿಕವಾಗಿ ಅಮೃತಹಳ್ಳಿಯ ಸರಕಾರಿ ಶಾಲೆಯಲ್ಲಿ ಹಾಗೂ ಅಮೃತಹಳ್ಳಿ ಸರಕಾರಿ ಆಸ್ಪತ್ರೆಯಲ್ಲೂ ಕೆಲವರಿಗೆ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಾಯುನಂದನ ಲೇಔಟ್‌ನ ಬಹು ಅಂತಸ್ತಿನ ಕಟ್ಟಡ ನಿಧಾನವಾಗಿ ವಾಲುತ್ತಿದ್ದು, ಈ ಕಟ್ಟಡ ಅಕ್ಕಪಕ್ಕದ ಹಲವು ಕಟ್ಟಡಗಳಿಗೂ ಹಾನಿ ಮಾಡುವ ಅಪಾಯ ಎದುರಾಗಿದೆ. ಹೀಗಾಗಿ, ಪೊಲೀಸ್, ಅಗ್ನಿ ಶಾಮಕ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ತುರ್ತಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದೇ ಮೊದಲಲ್ಲ: ಈ ಹಿಂದೆ 2018ರಲ್ಲಿ ನಗರದ ಮಾರೇನಹಳ್ಳಿಯಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ವಾಲಿತ್ತು. ಆ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ನಡೆಸಿದ ಬಿಬಿಎಂಪಿ, ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆ ನಡೆಸಿತ್ತು. 2012ರಲ್ಲೂ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಶಾಂತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರದಲ್ಲಿ ಐದು ಅಂತಸ್ತಿನ ಕಟ್ಟಡ ವಾಲಿತ್ತು. ಈ ವೇಳೆ ಕೂಡಾ ಕಟ್ಟಡ ನೆಲಸಮ ಕಾಮಗಾರಿ ನಡೆಸಲಾಗಿತ್ತು.
ಕೆಂಪಾಪುರದ ಜಿ. ರಾಮಯ್ಯ ಲೇಔಟ್‌ನಲ್ಲಿ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡದ ಸುತ್ತಲಿನ 35 ಮನೆಗಳ ನಿವಾಸಿಗಳನ್ನು ಖಾಲಿ ಮಾಡಿಸಿ ಸುರಕ್ಷಿತ ಸ್ಥಳದಲ್ಲಿ ಆಶ್ರಯ ನೀಡಲಾಗಿದೆ. ಅಲ್ಲದೆ 35 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಗ್ಯಾಸ್ ಸಿಲಿಂಡರ್, ವಾಹನಗಳು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಸ್ಥಳಾಂತರಿಸಿ, ಸೂಕ್ತ ಭದ್ರತೆ ನೀಡಿಲಾಗಿದೆ.
-ಬಿ.ಎಚ್. ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ







