ಬಜೆಟ್‌ನಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಘೋಷಣೆ: ಶ್ರೀರಾಮುಲು ವಿಶ್ವಾಸ

ಉಡುಪಿ, ಫೆ.6: ಉಡುಪಿ ಜಿಲ್ಲಾಸ್ಪತ್ರೆ ಪ್ರಸ್ತಾವನೆ ಬಜೆಟ್‌ನಲ್ಲಿ ಘೋಷಣೆ ಯಾಗುವ ಬಗ್ಗೆ ನನಗೆ 100ಕ್ಕೆ 100 ವಿಶ್ವಾಸ ಇದೆ. ಅದೇ ರೀತಿ ಮುಖ್ಯಮಂತ್ರಿ ಕೂಡ ಇದಕ್ಕೆ ಒಪ್ಪಿದ್ದಾರೆ. ಆದುದರಿಂದ ನಾನು ನೀಡಿದ ಮಾತಿನಂತೆ ಉಡುಪಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡುತ್ತೇನೆ ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಇಂದು ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ನನಗೆ ಆಕಾಂಕ್ಷೆ ಇರುವುದು ಹೌದು. ಆದರೆ ಯಡಿಯೂರಪ್ಪನವರ ಸ್ಥಿತಿಯನ್ನು ನಾವು ಅರಿತುಕೊಳ್ಳಬೇಕಾಗಿದೆ. ಸೂಕ್ತ ಅವಕಾಶಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ. ಪಕ್ಷ ನನ್ನನ್ನು ಗುರುತಿಸುತ್ತದೆ ಎಂಬ ನಂಬಿಕೆ ನನಗೆ ಇದೆ. ಯಡಿಯೂರಪ್ಪನಮ್ಮ ನಾಯಕರು, ಅವರ ಮೇಲೆ ನಮಗೆ ವಿಶ್ವಾಸವಿದೆ ಎಂದರು.
ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಪ್ರಧಾನ ಮಂತ್ರಿ ಮಗ ಮುಖ್ಯಮಂತ್ರಿಯಾಗುವುದು ದೊಡ್ಡ ವಿಚಾರ ಅಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತಾ ಬೆಳೆದವನು. ಐದು ಬಾರಿ ಶಾಸಕನಾಗಿ ಒಂದು ಬಾರಿ ಸಂಸದನಾಗಿ ಮೂರು ಬಾರಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕುಮಾರಸ್ವಾಮಿಯ ಮಟ್ಟಕ್ಕೆ ಇಳಿದು ಮಾತನಾಡಲು ನಾನು ಸಿದ್ಧನಿಲ್ಲ ಎಂದು ತಿಳಿಸಿದರು.
ಸಚಿವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಗೈರು ಹಾಜರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ನನ್ನ ಮಗಳ ಮದುವೆಯ ಸಿದ್ಧತೆಯಲ್ಲಿದ್ದೇನೆ. ಪಕ್ಷದ ಅನುಮತಿ ಪಡೆದು ಎಲ್ಲಾ ಜಿಲ್ಲೆಗಳಿಗೆ ಓಡಾಡಿ ಕಾರ್ಯಕರ್ತರಿಗೆ ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು.
ಇಂದು ಕರಾಳ ದಿನ ಎಂಬ ಉಗ್ರಪ್ಪ ಹೇಳಿಕೆಗೆ ಪ್ರತ್ರಿಕಿಯಿಸಿದ ಸಚಿವ ಶ್ರೀರಾಮುಲು, ಉಗ್ರಪ್ಪ ಅಧಿಕಾರ ಕಳೆದು ಹೋದ ಮೇಲೆ ಹತಾಶರಾಗಿದ್ದಾರೆ. ತನ್ನ ಜೊತೆಗಿದ್ದ ಶಾಸಕರು ಬಿಜೆಪಿಯಲ್ಲಿ ಸಚಿವರಾಗಿರುವುದು ಅವರಿಂದ ನೋಡಲಾಗುತ್ತಿಲ್ಲ. ಅವರ ಹೊಟ್ಟೆ ಉರಿಯ ಬಗ್ಗೆ ನನಗೆ ಮರುಕವಿದೆ ಎಂದು ಟೀಕಿಸಿದರು.
ಉಡುಪಿ ಶ್ರೀಕೃಷ್ಣ ಮಠ ಭೇಟಿ
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ಮಗಳ ಮದುವೆ ಆಮಂತ್ರಣದೊಂದಿಗೆ ಪೂಜೆ, ಶ್ರೀಕೃಷ್ಣ ದೇವರ ದರ್ಶನ ಪಡೆದರು. ಈ ಸಂದರ್ಭ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಸಚಿವರನ್ನು ರಾಜಾಂಗಣದಲ್ಲಿ ಸನ್ಮಾನಿಸಿದರು.
ಕೊರೋನಾ: ಕೇರಳ ಗಡಿಯಲ್ಲಿ ಚೆಕ್‌ಪೋಸ್ಟ್
ಕೊರೋನಾ ವೈರಸ್ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳ ಲಾಗಿದೆ. ವಿಶೇಷವಾಗಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರವಾಸಿಗರ ಬಗ್ಗೆ ಎಚ್ಚರ ವಹಿಸಲಾಗಿದೆ. ಅದೇ ರೀತಿ ಬಂದರು ಪ್ರದೇಶದಲ್ಲೂ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಕೇರಳದಿಂದ ಬರುವ ವಾಹನಗಳ ತಪಾಸಣೆಗೆ ಚೆಕ್ ಪೋಸ್ಟ್ ನಿರ್ಮಿಸ ಲಾಗಿದೆ. ಈವರೆಗೆ ಒಟ್ಟು 74 ಮಂದಿಗೆ ರಕ್ತಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ಎಲ್ಲವೂ ನೆಗೆಟಿವ್ ಬಂದಿದೆ. ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷವಾಗಿ ಹತ್ತು ಬೆಡ್ ಗಳನ್ನು ಮೀಸಲಿರಿಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಮಾಸ್ಕ್ ಸೌಲಭ್ಯ ಇದ್ದು, ಕೊರತೆ ಇರುವಲ್ಲಿ ಹೆಡ್ ಆಫ್ ಅಕೌಂಟ್ನಲ್ಲಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡ ಲಾಗಿದೆ. ಮೊಬೈಲ್ ಎಲ್ಇಡಿ ವಾಹನದಲ್ಲಿ ಜಾಗೃತಿ ಕಾರ್ಯಕ್ರಮ ಮಾಡ ಲಾಗುತ್ತಿದೆ. ಇದೊಂದು ಹೊಸ ಖಾಯಿಲೆಯಾಗಿದ್ದು, ಇದನ್ನು ಎದುರಿಸಲು ಆರೋಗ್ಯ ಇಲಾಖೆ ಸಿದ್ಧವಿದೆ ಎಂದರು.







