ಜೀವನದಲ್ಲಿ ತೃಪ್ತಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿ: ವಿದ್ಯಾರ್ಥಿಗಳಿಗೆ ನ್ಯಾ. ಸಂತೋಷ್ ಹೆಗ್ಡೆ ಕರೆ

ಬಂಟ್ವಾಳ, ಫೆ.6: ಪ್ರಸಕ್ತ ಸಮಾಜದಲ್ಲಿ ಎಲ್ಲಾ ಮೌಲ್ಯಗಳ ಕುಸಿತವನ್ನು ನಾವು ಕಾಣುತ್ತಿದ್ದೇವೆ. ಹೀಗಿರುವಾಗ ದುರಾಸೆ, ದುರುದ್ದೇಶ ಬಿಟ್ಟು ತೃಪ್ತಿ ಹಾಗೂ ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಮೂಲಕ ಪರಿಶುದ್ಧವಾದ ಜೀವನ ನಡೆಸಲು ಸಾಧ್ಯವಿದೆ ಎಂದು ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಅಂತರ್ ರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳದ ಆತಿಥ್ಯದಲ್ಲಿ ಗುರುವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ 'ತ್ರಿನೇತ್ರಾ - ನಾಳೆಗಳ ಭರವಸೆಗಳ ಕಣ್ಣುಗಳು' ಎನ್ನುವ ಕಾನೂನು, ರಾಜಕೀಯ, ಮನಶಾಸ್ತ್ರ ತಜ್ಞರೊಂದಿಗೆ ನೇರಾ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಮಾತನಾಡಿದರು.
ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳ ಬಗ್ಗೆ ವಿಷಯಗಳಿರುವುದಿಲ್ಲ. ವಸ್ತುಗಳ ಅನ್ವೇಷಣೆ ಹೇಗೆ ಮಾಡುವುದು ಎನ್ನುವುದನ್ನು ಶಾಲೆಗಳಲ್ಲಿ ತಿಳಿಸಿಕೊಡುತ್ತಾರೆ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುವುದಿಲ್ಲ ಎಂದು ಹೇಳಿದರು. ಬೋಪೋರ್ಸ ಹಗರಣದಲ್ಲಿ ದೇಶಕ್ಕೆ 64 ಕೊಟಿ ರೂ. ನಷ್ಟವಾಗಿದೆ. ಕಲ್ಲಿದ್ದಲು ಹಗರಣದಲ್ಲಿ 1 ಲಕ್ಷ 86 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದು ಮನಷ್ಯ ರಲ್ಲಿರುವ ದುರಾಸೆಯಿಂದಾಗಿ ನಡೆಯುತ್ತಿದೆ ಎಂದು ಹೇಳಿದರು.
ಲಯನ್ಸ್ ಕ್ಲಬ್‍ನ ರಾಜ್ಯಪಾಲ ರೊನಾಲ್ಡ್ ಐಸಕ್ ಗೋಮ್ಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಧೈರ್ಯ, ದೃಢತೆ, ಸಾಧಿಸುವ ಛಲ ಇದ್ದಾಗ ನಾವು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅನಿತಾ ರೋನಾಲ್ಡ್ ಗೋಮ್ಸ್ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಲಯನ್ಸ್ ಕ್ಲಬ್‍ನ ಪ್ರಥಮ ಉಪ ರಾಜ್ಯಪಾಲ ಗೀತ್ ಪ್ರಕಾಶ್, ದ್ವಿತೀಯ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಇಂದಿರೇಶ್ ಬಿ. ಉಪಸ್ಥಿತರಿದ್ದರು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಸಂಚಾಲಕ ಚೇತನ್ ಮುಂಡಾಜೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತ್ರಿನೇತ್ರಾ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕಾನೂನು ಕ್ಷೇತ್ರದ ಬಗ್ಗೆ ನ್ಯಾ. ಸಂತೋಷ್ ಹೆಗ್ಡೆ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟೀನ್ ಡಿಸೋಜಾ, ರಾಜಕೀಯ ಕ್ಷೇತ್ರದ ಬಗ್ಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಮನಃಶಾಸ್ತ್ರದ ಬಗ್ಗೆ ಮಕ್ಕಳ ಮತ್ತು ಹದಿಹರೆಯದ ಮಾನಸಿಕ ಆರೋಗ್ಯ ತಜ್ಞೆ ರಮೀಳಾ ಶೇಖರ್ ಮನೋ ಡಾ. ರವೀಶ್ ತುಂಗ ಭಾಗವಹಿಸಿದ್ದರು.
ಲಯನ್ಸ್ ಸಂಸ್ಥೆಯ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಸಮನ್ವಯಕಾರರಾಗಿ ಭಾಗವಹಿಸಿದ್ದರು. ಸುಮಾರು 22 ಕಾಲೇಜುಗಳ 975 ವಿದ್ಯಾರ್ಥಿಗಳು ಮುಖಾಮುಖಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.







