ಕೊರೋನವೈರಸ್‌ಗೆ ಯಾವುದೇ ಬಲ್ಲ ಪರಿಣಾಮಕಾರಿ ಚಿಕಿತ್ಸೆಯಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವ, ಫೆ. 6: ನೂತನ ಕೊರೋನವೈರಸ್ ಸೋಂಕಿಗೆ ಒಳಗಾದ ಜನರಿಗೆ ಚಿಕಿತ್ಸೆ ನೀಡಲು ‘ಪರಿಣಾಮಕಾರಿ’ ಔಷಧಗಳನ್ನು ಸಂಶೋಧಿಸಲಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಳ್ಳಿಹಾಕಿದೆ.
ಈ ಮಾರಕ ವೈರಸ್‌ಗೆ ಝೆಜಿಯಾಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಪರಿಣಾಮಕಾರಿ ಔಷಧವೊಂದನ್ನು ಕಂಡುಹಿಡಿದಿದ್ದಾರೆ ಎಂಬುದಾಗಿ ಚೀನಾದ ಟೆಲಿವಿಶನೊಂದು ವರದಿ ಮಾಡಿದೆ. ಅದೇ ವೇಳೆ, ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ‘ಗಮನಾರ್ಹ ಸಾಧನೆ’ ಮಾಡಿದ್ದಾರೆ ಎಂಬುದಾಗಿ ಬ್ರಿಟನ್‌ನ ‘ಸ್ಕೈ ನ್ಯೂಸ್’ ವರದಿ ಮಾಡಿತ್ತು.
ಈ ವರದಿಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ತಾರಿಕ್ ಜಸರೆವಿಚ್, ‘‘ಈ 2019ರ ನೂತನ ಕೊರೋನವೈರಸ್‌ಗೆ ಯಾವುದೇ ಬಲ್ಲ ಪರಿಣಾಮಕಾರಿ ಚಿಕಿತ್ಸೆಯಿಲ್ಲ ಹಾಗೂ ಕಂಡುಹಿಡಿಯಲಾಗಿದೆ ಎನ್ನಲಾದ ಔಷಧಗಳ ಪರಿಣಾಮ ಮತ್ತು ಸುರಕ್ಷತೆಯನ್ನು ಪರೀಕ್ಷಿಸಲು ಅವುಗಳನ್ನು ನೋಂದಾಯಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ’’ ಎಂದರು.
Next Story





