ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ: ಹೈಕೋರ್ಟ್ ಎಚ್ಚರಿಕೆ
ಮಕ್ಕಳ ಪತ್ತೆ ವಿಚಾರದಲ್ಲಿ ಆದೇಶ ಪಾಲನೆಯಲ್ಲಿ ವಿಳಂಬ

ಬೆಂಗಳೂರು, ಫೆ.6: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ, ವಲಸೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಆದೇಶಗಳ ಅನುಪಾಲನಾ ವರದಿಯನ್ನು ಫೆ.26ರೊಳಗೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 2013ರಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲಿಸುವ ಜವಾಬ್ದಾರಿ ಹೊಂದಿರುವ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ನ್ಯಾಯಪೀಠವು ಎಚ್ಚರಿಕೆ ನೀಡಿತು.
ನ್ಯಾಯಪೀಠವು ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವಲ್ಲಿ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಸ್ವತಃ ಅಡ್ವೊಕೇಟ್ ಜನರಲ್ ಅಥವಾ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಕೋರ್ಟ್ ಮುಂದೆ ಹಾಜರಾಗಬೇಕೆಂದು ನಿರ್ದೇಶನ ನೀಡಿತು.
ಮಕ್ಕಳು ಶಾಲೆಗೆ ಬರದಿರಲು ಕಾರಣ: ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವೇನೆಂದು ಸರಕಾರ ಸಮೀಕ್ಷೆ ನಡೆಸಿದ್ದು, ಅಚ್ಚರಿಯ ಮಾಹಿತಿ ಲಭಿಸಿದೆ. ವಲಸೆ(ಶೇ.31.10) ಅತಿಮುಖ್ಯ ಕಾರಣವಾಗದೆ, ಮಕ್ಕಳ ನಿರಾಸಕ್ತಿ(ಶೇ.18.58), ಪಾಲಕರ ನಿರಾಸಕ್ತಿ(ಶೇ.20.14) ಇನ್ನಿತರ ಕಾರಣಗಳು. ಈ ಸಮೀಕ್ಷೆಯಲ್ಲಿ ಸಿಕ್ಕಿರುವ ಮಾಹಿತಿ ಆಧರಿಸಿ ಪರಿಹಾರೋಪಾಯಗಳ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದೆ ರಾಜ್ಯ ಸರಕಾರ.







