ರಾಷ್ಟ್ರೀಯ ಪೌರತ್ವ ನೋಂದಣಿ: ವಿವಾಹ ಪ್ರಮಾಣಪತ್ರಕ್ಕೆ ವಕ್ಭ್ ಮಂಡಳಿಯಲ್ಲಿ ಮುಗಿಬಿದ್ದ ಜನತೆ
ಹೈದರಾಬಾದ್, ಫೆ. 6: ಜನರು ವಾಸ್ತವ್ಯ ಪುರಾವೆ ಪಡೆಯಲು ಬಯಸುತ್ತಿರುವುದರಿಂದ ವಕ್ಫ್ ಮಂಡಳಿ ವಿವಾಹ ಪ್ರಮಾಣಪತ್ರದ ಅರ್ಜಿಗಳಿಂದ ತುಂಬಿ ಹೋಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನಗೊಳಿಸಿದರೆ, ಎನ್‌ಆರ್‌ಸಿಯಲ್ಲಿ ನೋಂದಣಿ ಮಾಡಲು ವಕ್ಭ್ ಬೋರ್ಡ್ ನೀಡುವ ವಿವಾಹ ಪ್ರಮಾಣ ಪತ್ರವನ್ನು ಮೌಲ್ಯಯುತ ಪುರಾವೆ ಎಂದು ಪರಿಗಣಿಸಲಾಗುತ್ತಿದೆ.
ಕಳೆದ ಒಂದು ತಿಂಗಳಲ್ಲಿ ವಕ್ಫ್ ಮಂಡಳಿ ಪ್ರತಿ ದಿನ ಸುಮಾರು 300ಕ್ಕೂ ಅಧಿಕ ವಿವಾಹ ಪ್ರಮಾಣ ಪತ್ರಗಳನ್ನು ನೀಡಿದೆ. ಇದು ಸಾಮಾನ್ಯವಾಗಿ ದಿನದಲ್ಲಿ ಸ್ವೀಕರಿಸುವ ಅರ್ಜಿಗಳ ಎರಡು ಪಟ್ಟು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 50 ಸಾವಿರ ವಿವಾಹ ನೆರವೇರಿಸಲಾಗುತ್ತದೆ. ವಕ್ಫ್ ಮಂಡಳಿ ಈಗಾಗಲೇ 2019ರಲ್ಲಿ 40 ಸಾವಿರ ವಿವಾಹ ಪ್ರಮಾಣ ಪತ್ರಗಳನ್ನು ನೀಡಿದೆ. 30-40 ವರ್ಷಗಳ ಹಿಂದೆ ನೆರವೇರಿದ ವಿವಾಹಗಳ ಪ್ರಮಾಣ ಪತ್ರಗಳಿಗೆ ಕೂಡ ಜನರು ಮನವಿ ಸಲ್ಲಿಸುತ್ತಿದ್ದಾರೆ.
ಕೆಲವರು ತಮ್ಮ ಹೆತ್ತವರ ವಿವಾಹದ ಪ್ರಮಾಣ ಪತ್ರಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ ಎಂದು ವಕ್ಫ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದು ಮುಂದುವರಿದರೆ, ವಕ್ಫ್ ಮಂಡಳಿ ಈ ವರ್ಷ 1 ಲಕ್ಷ ವಿವಾಹ ಪ್ರಮಾಣ ಪತ್ರಗಳನ್ನು ನೀಡಬೇಕಾಗಬಹುದು. ಅದು ಸಾರ್ವಕಾಲಿಕ ದಾಖಲೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.





