ಪುಡಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಆರೋಪ - ಇಬ್ಬರ ವಿರುದ್ದ ಪ್ರಕರಣ ದಾಖಲು
ಪುತ್ತೂರು: ಭೂ ಸ್ವಾದೀನಗೊಳಿಸಲಿರುವ ಜಾಗದಲ್ಲಿ ಕಟ್ಟಡ ಕಟ್ಟುತ್ತಿರುವ ದೂರಿನ ಹಿನ್ನೆಲೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಇಂಜಿನಿಯರ್ ಸ್ಥಳ ಪರಿಶೀಲನೆಗೆ ಬಂದಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ನಿರ್ಮಾಣ ಹಂತದ ಕಟ್ಟಡದ ಮಾಲಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿದ್ದಾರೆ.
ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಶ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ನಿರ್ಮಾಣ ಹಂತದ ಕಟ್ಟಡದ ಮಾಲಕರಾದ ರಂಗನಾಥ ಕೆದಿಲಾಯ ಮತ್ತು ಅವರ ಪುತ್ರ ಗೋಪಾಲಕೃಷ್ಣ ಕೆದಿಲಾಯ ಅವರನ್ನು ವಶಕ್ಕೆ ಪಡೆದು ಕೊಂಡಿದ್ದು, ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಪಕ್ರರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿನ ಎಪಿಎಂಸಿ ಸಂಪರ್ಕದ ರಸ್ತೆಯಲ್ಲಿ ಸ್ಥಳ ಪರಿಶೀಲನೆಗೆಂದು ಸಹಾಯಕ ಕಮೀಷನರ್ ಸೂಚನೆಯಂತೆ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಶ್ ಅವರು ಸ್ಥಳ ಪರಿಶೀಲನೆಗಾಗಿ ಗುರುವಾರ ಜೀಪು ಚಾಲಕ ಸಂತೋಷ್ ಮತ್ತು ಇಂಜಿನಿಯರ್ ದೀಪಕ್ ಅವರ ಜೊತೆ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕಟ್ಟಡದ ಮಾಲಕ ರಂಗನಾಥ ಕೆದಿಲಾಯ ಮತ್ತು ಅವರ ಪುತ್ರ ಗೋಪಾಲಕೃಷ್ಣ ಅವರು ಸ್ಥಳ ಪರಿಶೀಲನೆಗೆ ಅಡ್ಡಿ ಪಡಿಸಿದರಲ್ಲದೆ ಅಭಿಲಾಶ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನನಗೆ ಹಲ್ಲೆ ನಡೆಸಿದ್ದಾರೆ ಎಂದು ಅಭಿಲಾಶ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.







