ಗುಂಪಿನಿಂದ ಹತ್ಯೆಯನ್ನು ಪ್ರಚೋದಿಸಿದ ಆರೋಪದಲ್ಲಿ ಬಿಜೆಪಿ ನಾಯಕ ಬಂಧನ

ಭೋಪಾಲ, ಫೆ. 6: ಧಾರ್ ಜಿಲ್ಲೆಯ ಬೋರ್ಲೈ ಗ್ರಾಮದಲ್ಲಿ ಓರ್ವ ಸಾವನ್ನಪ್ಪಿ, ಐವರು ಗಾಯಗೊಳ್ಳಲು ಕಾರಣವಾದ ಗುಂಪು ಥಳಿತಕ್ಕೆ ಜನರನ್ನು ಪ್ರಚೋದಿಸಿದ ಆರೋಪದಲ್ಲಿ ಬಿಜೆಪಿ ನಾಯಕನೋರ್ವನನ್ನು ಮಧ್ಯಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಿಜೆಪಿ ನಾಯಕ ರಮೇಶ್ ಜುನಪಾನಿ ಗುಂಪಿನ ನೇತೃತ್ವ ವಹಿಸಿ ಈ ಪ್ರದೇಶದಲ್ಲಿ ಮಕ್ಕಳ ಅಪಹರಣಕಾರರು ಸಕ್ರಿಯರಾಗಿದ್ದಾರೆ ಎಂದು ಜನರನ್ನು ಪ್ರಚೋದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉಜ್ಜೈನಿ ಹಾಗೂ ಇಂದೋರ್‌ನ 6 ರೈತರನ್ನು ಥಳಿಸಿದ ಪ್ರಕರಣದಲ್ಲಿ ಬಾಗಿಯಾದ ಇತರ ಮೂವರನ್ನು ಕೂಡ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ನೀಡಿದ್ದ ಮುಂಗಡ 2.5 ಲಕ್ಷ ರೂಪಾಯಿಯಲ್ಲಿ 1.5 ಲಕ್ಷ ರೂಪಾಯಿಯನ್ನು ಹಿಂದೆ ಪಡೆಯಲು ಈ ರೈತರು ಕಿಡ್ಕಿಯಾ ಗ್ರಾಮಕ್ಕೆ ಆಗಮಿಸಿದ್ದರು. ಮುಂಗಡ ಪಡೆದಿದಿದ್ದರೂ ಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಮನವರ್ ಪೊಲೀಸ್ ಠಾಣೆಯ ಉಸ್ತುವಾರಿ ಸಹಿತ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಹಾಗೂ ತನಿಖೆಗೆ ಸಿಟ್ ತಂಡ ರೂಪಿಸಲಾಗಿದೆ. ಬಿಜೆಪಿ ನಾಯಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳಿಗಾಗಿ ಬಿಲ್ ಬುಡಕಟ್ಟು ಪ್ರಾಬಲ್ಯದ ಗ್ರಾಮದಲ್ಲಿ ಶೋಧ ನಡೆಯುತ್ತಿದೆ ಎಂದು ಧಾರ್‌ನ ಪೊಲೀಸ್ ಅಧೀಕ್ಷಕ ಎ.ಪಿ. ಸಿಂಗ್ ಹೇಳಿದ್ದಾರೆ.





