ಇಂತಹ ಸ್ಪರ್ಧೆಗಳು ಬೇಕಿತ್ತೇ?
ಮಾನ್ಯರೇ,
ಬೆಳಗಾವಿಯಲ್ಲಿರುವ ಕರ್ನಾಟಕ ಸರಕಾರದ ಅಧೀನ ಸಂಸ್ಥೆಯಾದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು 2019ರ ಕೊನೆಯಲ್ಲಿ ಬಸವರಾಜ ಕಟ್ಟೀಮನಿಯವರ ಕಥೆಗಳ ಮೇಲೆ ವಿಮರ್ಶಾ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯ ನಿಯಮಾವಳಿಯಂತೆ ವಿಜೇತ ಪ್ರಬಂಧಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ, ನಗದು ಬಹುಮಾನ ನೀಡುವುದಾಗಿಯೂ ಪ್ರಕಟನೆಯಲ್ಲಿ ತಿಳಿಸಲಾಗಿತ್ತು. ಅದರಂತೆ ರಾಜ್ಯದ ವಿವಿಧೆಡೆಯಿಂದ ಅನೇಕಾರು ವಿದ್ಯಾರ್ಥಿಗಳು, ಬರಹಗಾರರು ಮತ್ತು ಸಾಹಿತ್ಯಾಸಕ್ತರು ಸ್ಪರ್ಧೆಗೆ ಪ್ರಬಂಧಗಳನ್ನು ಕಳುಹಿಸಿದ್ದರು.
ಮೊನ್ನೆ ಜನವರಿ 21ನೇ ತಾರೀಕಿಗೆ ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ ಫಲಿತಾಂಶ ಮಾತ್ರ ವಿಚಿತ್ರವಾಗಿತ್ತು. ಹೇಗೆಂದರೆ ಪ್ರಥಮ ಬಹುಮಾನ ಯಾರಿಗೂ ಇಲ್ಲ. ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ತಲಾ ಇಬ್ಬರ ಪ್ರಬಂಧಗಳನ್ನು ಆಯ್ಕೆ ಮಾಡಲಾಗಿತ್ತು.ಸದ್ರಿ ಸ್ಪರ್ಧೆಯಲ್ಲಿ ವಿಜೇತನಾದ ನನ್ನ ಗೆಳೆಯನೊಬ್ಬ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಕಚೇರಿಯನ್ನು ಸಂಪರ್ಕಿಸಿ ವಿವರಣೆ ಕೇಳಿದಾಗ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗುವ ಗುಣಮಟ್ಟದ ಪ್ರಬಂಧಗಳು ಬರಲಿಲ್ಲವಾದ್ದರಿಂದ ಪ್ರಥಮ ಬಹುಮಾನ ಘೋಷಿಸಿಲ್ಲ ಎಂಬ ಸಮಜಾಯಿಷಿ ಕೊಟ್ಟರು. ಇದೆಂತಹ ವಿಚಿತ್ರ ಸ್ಪಷ್ಟೀಕರಣವೋ ಗೊತ್ತಾಗುತ್ತಿಲ್ಲ. ಮೌಲ್ಯಮಾಪಕರು ಅಂಕ ಹಾಕಿದ್ದರಲ್ಲಿ ಯಾವುದಕ್ಕೆ ಅತೀ ಹೆಚ್ಚು ಅಂಕ ಬರುತ್ತದೋ ಅದನ್ನು ಪ್ರಥಮ ಎಂದು ಘೋಷಿಸುವುದು ವಾಡಿಕೆ. ಪ್ರಥಮ ಬಹುಮಾನಕ್ಕೆ ಆಯ್ಕೆಯಾಗದೆ ದ್ವಿತೀಯ ಮತ್ತು ತೃತೀಯ ಬಹುಮಾನ ಹೇಗೆ ಘೋಷಿಸಲಾಗುತ್ತದೆ...?
ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಂಖ್ಯೆಯ ಪ್ರಬಂಧಗಳು ಬರದಿದ್ದಾಗ ಸ್ಪರ್ಧೆಯ ಕೊನೆಯ ದಿನಾಂಕವನ್ನು ಮತ್ತಷ್ಟು ಮುಂದೂಡಿ ಪುನಃ ಪ್ರಕಟನೆ ಕೊಡುವುದು, ಅದಕ್ಕೂ ಸೂಕ್ತ ಸ್ಪಂದನೆ ಸಿಗದಿದ್ದಾಗ ಸ್ಪರ್ಧೆಯನ್ನು ರದ್ದುಪಡಿಸುವ ಕ್ರಮವಾದರೂ ಇದೆ. ಆದರೆ ಇದಂತೂ ಬಹಳ ವಿಚಿತ್ರ ಸ್ಪರ್ಧಾ ನಿಯಮದಂತೆ ಕಾಣುತ್ತಿದೆ. ಒಂದು ವೇಳೆ ಯಾವುದಾದರೂ ಆರ್ಥಿಕ ಚೈತನ್ಯವಿಲ್ಲದ ಸಂಸ್ಥೆಯೊಂದು ಬಹುಮಾನದ ಮೊತ್ತ ಕೊಡಲಾಗದೆ ಅದನ್ನು ಕಡಿತಗೊಳಿಸಿದರೆ ಅದನ್ನು ಕ್ಷಮಿಸಬಹುದಿತ್ತು. ಆದರೆ ಇದು ಸರಕಾರಿ ಸಂಸ್ಥೆಯಾಗಿರುವುದರಿಂದ ಇಂತಹ ನಿಯಮಾವಳಿಗಳನ್ನು ಸ್ಪರ್ಧೆಗೆ ಪ್ರಬಂಧಗಳು ಬಂದು ಮೌಲ್ಯಮಾಪಕರು ಆಯ್ಕೆ ಮಾಡಿದ ಬಳಿಕ ಏಕಾಏಕಿ ಹೇರುವುದು ಸಮಂಜಸವಲ್ಲ. ಕನ್ನಡದ ಓರ್ವ ಅತೀ ಮಹತ್ವದ ಸಾಹಿತಿಯಾದ ಬಸವರಾಜ್ ಕಟ್ಟೀಮನಿ ಹೆಸರಲ್ಲಿ ಸರಕಾರಿ ಸಂಸ್ಥೆಯೊಂದು ಸ್ಪರ್ಧೆ ನಡೆಸಿ ಪ್ರಥಮ ಬಹುಮಾನವನ್ನು ರದ್ದುಗೊಳಿಸುವುದು ಅವರಿಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಮಾಡುವ ಅವಮಾನ. ಆದುದರಿಂದ ಯಾರಿಗೆ ಮೌಲ್ಯಮಾಪಕರು ಅತೀ ಹೆಚ್ಚು ಅಂಕ ನೀಡಿದ್ದಾರೋ ಅವರಿಗೆ ಪ್ರಥಮ ಬಹುಮಾನ ಘೋಷಣೆ ಮಾಡಬೇಕು. ಅದು ಸಾಧ್ಯವಿಲ್ಲವಾದರೆ ಇಂತಹ ಸ್ಪರ್ಧೆಗಳನ್ನು ಮುಂದೆಂದೂ ಏರ್ಪಡಿಸಬಾರದು.







