ಅತ್ಯಾಚಾರ ಆರೋಪಿ ಚಿನ್ಮಯಾನಂದಗೆ ಎನ್‌ಸಿಸಿ ಕೆಡೆಟ್‌ಗಳಿಂದ ಸೆಲ್ಯೂಟ್!

ಶಾಹಜಹಾನ್‌ಪುರ,ಫೆ.7: ಅತ್ಯಾಚಾರದ ಆರೋಪದಲ್ಲಿ ಜೈಲುಪಾಲಾಗಿ ಈಗ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಶುಕ್ರವಾರ ಇಲ್ಲಿಯ ತನ್ನ ಮುಮುಕ್ಷು ಆಶ್ರಮಕ್ಕೆ ಭೇಟಿ ನೀಡಿದಾಗ, ಆಶ್ರಮವು ನಡೆಸುತ್ತಿರುವ ಕಾಲೇಜುಗಳ ಎನ್‌ಸಿಸಿ ಕೆಡೆಟ್ ಗಳು ಚಿನ್ಮಯಾನಂದಗೆ ಸೆಲ್ಯೂಟ್ ಹೊಡೆದಿದ್ದಾರೆ. ಅಲ್ಲಿ ಸೇರಿದ್ದ ನೂರಾರು ಬೆಂಬಲಿಗರಿಗೆ ವಿಶೇಷ ಪ್ರಸಾದವನ್ನು ವಿತರಿಸಲಾಗಿದೆ.
ಚಿನ್ಮಯಾನಂದ ಆರೋಪಿಯಾಗಿರುವುದರಿಂದ ಎನ್‌ಸಿಸಿ ಕೆಡೆಟ್ ಗಳು ಅವರಿಗೆ ಸೆಲ್ಯೂಟ್ ಹೊಡೆಯಬಾರದಿತ್ತು. ವಿವಿಧ ಕಾಲೇಜುಗಳನ್ನು ನಡೆಸುತ್ತಿರುವ ಮುಮುಕ್ಷು ಆಶ್ರಮದ ಮುಖ್ಯಸ್ಥರಾಗಿರುವುದರಿಂದ ಸೆಲ್ಯೂಟ್ ಹೊಡೆದಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದ ಕಾನೂನು ವಿದ್ಯಾರ್ಥಿನಿಗೆ ಮತ್ತು ಆಕೆಯ ಕುಟುಂಬದ ರಕ್ಷಣೆಗಾಗಿ ತಲಾ ಓರ್ವ ಗನ್‌ಮ್ಯಾನ್‌ನ್ನು ನಿಯೋಜಿಸಲಾಗಿದೆ. ಬಂಧನದ ಬಳಿಕ ಚಿನ್ಮಯಾನಂದಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಅವರು ಭದ್ರತೆ ಕೋರಿದರೆ ಆ ಬಗ್ಗೆ ಸಮಿತಿಯೊಂದು ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಎಸ್‌ಪಿ ದಿನೇಶ ತ್ರಿಪಾಠಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದರು.





