ಮೌನವಾಗಿರಲು ನಿರ್ಧರಿಸಿದ್ದೇನೆ: ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಫೆ. 7: ಅತೃಪ್ತಿ, ಅಸಮಾದಾನ, ಅಸಮತೋಲನ ಎಲ್ಲವೂ ಇದೀಗ ಮುಗಿದ ಅಧ್ಯಾಯ. ಇನ್ನು ನಾನು ಮೌನದಿಂದ ಇರಲು ತೀರ್ಮಾನಿಸಿದ್ದೇನೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಧ್ಯಾನ ಯೋಗ ಪ್ರಾಣಾಯಾಮ ಮಾಡುವವನು. ಹೀಗಾಗಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದೇನೆ. ಪ್ರಾದೇಶಿಕ ಅಸಮತೋಲನ ಸೇರಿದಂತೆ ಎಲ್ಲವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಸರಿಪಡಿಸಲಿದ್ದಾರೆ ಎಂದರು.
ಬಿಜೆಪಿಯಲ್ಲಿ ಬಂಡಾಯ, ಭಿನ್ನಮತ ಯಾವುದು ಇಲ್ಲ. ನನ್ನನ್ನು ರಾಜಕೀಯವಾಗಿ ಬೆಳೆಸಿದವರೇ ಯಡಿಯೂರಪ್ಪ, ಹೀಗಾಗಿ ನಾನು ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಅವರಿಗೆ ನಮ್ಮನ್ನು ಮುಂದೆ ಬಿಟ್ಟು ಬಂಡಾಯ ಮಾಡುವ ಅಗತ್ಯವೇನಿಲ್ಲ ಎಂದರು.
ಸಚಿವ ಸ್ಥಾನ ನೀಡುವಲ್ಲಿ ಪ್ರಾದೇಶಿಕ ಅಸಮತೋಲನ ಆಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಬೇಕು. ಅಲ್ಲದೆ, ಸೋತವರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು ಸಮಾನ ಮನಸ್ಕ ಗೆಳೆಯರು ಸೇರಿ ಚರ್ಚಿಸಿದ್ದೇವೆ, ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
‘ನಿನ್ನೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನನ್ನ ಆತ್ಮೀಯ ಸ್ನೇಹಿತರಾದ ಬಿ.ಸಿ.ಪಾಟೀಲ್ ಅವರು ವಿಕಾಸಸೌಧದ ನನ್ನ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದ್ದೇನೆ’
-ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ







