ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಮಿತಿ 20 ಕ್ವಿಂಟಾಲ್ ಗೆ ಹೆಚ್ಚಳ: ಸಿಎಂ ಯಡಿಯೂರಪ್ಪ

ಬೀದರ್, ಫೆ. 7: ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ತೊಗರಿಬೆಳೆಯ ಮಿತಿಯನ್ನು ಪ್ರತಿ ರೈತರಿಗೆ 10ರಿಂದ 20 ಕ್ವಿಂಟಾಲ್ ಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಿಸಿದ್ದಾರೆ.
ಶುಕ್ರವಾರ ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪಶು ಮೇಳ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ರೈತರು ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿ ಬೆಳೆಯ ಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದು, ರೈತರ ಹಿತರಕ್ಷಣೆಗೆ ಹಾಗೂ ಆದಾಯ ಹೆಚ್ಚಳಕ್ಕೆ ಸರಕಾರ ಬದ್ಧವಾಗಿದೆ.
ಹೀಗಾಗಿ ಈ ಮಿತಿಯನ್ನು 20ಕ್ವಿಂಟಾಲ್ ಗಳಿಗೆ ಹೆಚ್ಚಿಸಲು ಕೂಡಲೇ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದರು. ಯಡಿಯೂರಪ್ಪರ ಈ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ ರೈತ ಮುಖಂಡರು ಸ್ಥಳದಲ್ಲೇ ಸಿಎಂ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
Next Story





