ಕೇಸರಿ ಗುಂಪಿನ ಬೆದರಿಕೆ: ಗಾಂಧೀಜಿ ಮರಿಮೊಮ್ಮಗ ತುಷಾರ್‌ಗಾಂಧಿ ಉಪನ್ಯಾಸ ರದ್ದು

ಪುಣೆ,ಫೆ.7: ‘ಪತಿತ್‌ಪಾವನ ಸಂಸ್ಥಾ’ ಎಂಬ ಕೇಸರಿ ಸಂಘಟನೆಯೊದರಿಂದ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಕಾಲೇಜೊಂದು ತಾನು ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿಯವರ ಮರಿಮೊಮ್ಮಗ ಹಾಗೂ ಬರಹಗಾರ ತುಷಾರ್ ಗಾಂಧಿಯವರ ಉಪನ್ಯಾಸ ಕಾರ್ಯಕ್ರಮವನ್ನು ರದ್ದುಪಡಿಸಿದೆ. ಈ ಬಗ್ಗೆ ಗುರುವಾರ ರಾತ್ರಿ ಟ್ವೀಟ್ ಮಾಡಿರುವ ತುಷಾರ್ ಗಾಂಧಿ, ‘‘ ಗೋಲಿಮಾರೋ ಗ್ಯಾಂಗ್ ಕಾರ್ಯನಿರತವಾಗಿದೆ’’ ಎಂದು ಹೇಳಿದ್ದಾರೆ.
ತುಷಾರ್ ಗಾಂಧೀಜಿಯವರ ಉಪನ್ಯಾಸ ಕಾರ್ಯಕ್ರಮವನ್ನು ಪುಣೆಯ ಮಾಡರ್ನ್ ಕಾಲೇಜ್ ನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಮಾಡರ್ನ್ ಕಾಲೇಜ್‌ನ ಮಾಲಕಸಂಸ್ಥೆಯ ಅಧ್ಯಕ್ಷ ಗಜಾನನ ಎಕ್‌ಬೊಟೆ ಸುದ್ದಿಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿ, ‘‘ ಗುರುವಾರ ರಾತ್ರಿ ತುಷಾರ್ ಗಾಂಧಿ ಜೊತೆ ನಾನು ಮಾತನಾಡಿದ್ದು, ಬೆದರಿಕೆ ಕರೆಳು ಬಂದಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ’’ ಎಂದು ತಿಳಿಸಿದ್ದಾರೆ.
ಮುಂದಿನ ಹದಿನೈದು ದಿನಗಳೊಳಗೆ ಕಾಲೇಜ್ ನಲ್ಲಿ ತುಷಾರ್ ಗಾಂಧೀಜಿಯವರ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ತಮ್ಮ ಸಂಸ್ಥೆ ಮಹಾತ್ಮಾಗಾಂಧೀಜಿಯವರ ಚಿಂತನೆಗಳಿಗೆ ವಿರುದ್ಧವಾಗಿಲ್ಲ, ಗಾಂಧೀಜಿಯವರು ನಮ್ಮ ಕಾಲೇಜ್‌ನ ಪಠ್ಯ ಹಾಗೂ ಅಧ್ಯಯನದ ಭಾಗವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ತುಷಾರ್ ಗಾಂಧಿಯ ಉಪನ್ಯಾಸ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ‘ಪತಿತ್‌ಪಾವನ ಸಂಸ್ಥಾ’ ಕೇಸರಿ ಗುಂಪಿನ ವಿದ್ಯಾರ್ಥಿ ಘಟಕದ ನಾಯಕನೊಬ್ಬ ಕಾಲೇಜ್ ಆಡಳಿತ ಮಂಡಳಿಗೆ ತಿಳಿಸಿದ್ದನೆಂದು ಎಕ್‌ಬೊತೆೆ ಹೇಳಿದ್ದಾರೆ. ಕಾಲೇಜ್‌ನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಭಂಗಗೊಳ್ಳುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಉಪನ್ಯಾಸವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ.
ಕಾಲೇಜ್ ಆಡಳಿತ ಮಂಡಳಿಯ ನಿರ್ಧಾರವನ್ನು ಪುಣೆಯ ಸಾಮಾಜಿಕ ಕಾರ್ಯಕರ್ತ ಕುಮಾರ್ ಸಪ್ತರ್ಷಿ ಟೀಕಿಸಿದ್ದು, ಹಿಂದುತ್ವವಾದಿ ಸಂಘಟನೆಯ ಮುಂದೆ ಕಾಲೇಜ್ ಆಡಳಿತ ಮಂಡಳಿಯು ತಲೆಬಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಾಲುದಾರರಾಗಿರುವ ಶಿವಸೇನಾ ನೇತೃತ್ವದ ಮೈತ್ರಿಕೂಟ ಸರಕಾರವು ತುಷಾರ್ ಗಾಂಧಿಗೆ ಭದ್ರತೆಯನ್ನು ಒದಗಿಸಲು ವಿಫಲವಾಗಿರುವವುದು ನಾಚಿಕೆಗೇಡಿನದ್ದಾಗಿಯೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ ಸಚಿವ ಹಾಗೂ ಎನ್‌ಸಿಪಿ ನಾಯಕ ಜಿತೇಂದ್ರ ಅವಾದ್ ಹೇಳಿಕೆಯೊಂದನ್ನು ನೀಡಿ, ಘಟನೆಯ ಬಗ್ಗೆ ತಾನು ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್ ಅವರೊಂದಿಗೆ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. ಈ ವಿಷಯವಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹಾಗೂ ತುಷಾರ್ ಗಾಂಧಿ ಜೊತೆ ಮಾತನಾಡುವುದಾಗಿ ಸಚಿವ ದೇಶಮುಖ್ ತನಗೆ ಭರವಸೆ ನೀಡಿದ್ದಾರೆಂದು ಅವಾದ್ ತಿಳಿಸಿದ್ದಾರೆ.







