ಕೊರೊನಾ ವೈರಸ್: ಉಡುಪಿಯಲ್ಲಿ ನಾಲ್ಕು ಸಂಶಯಾಸ್ಪದ ಪ್ರಕರಣ ?

ಉಡುಪಿ, ಫೆ.7: ವಿಶ್ವದಾದ್ಯಂತ ಅಲ್ಲೋಕಕಲ್ಲೋಲ ಎಬ್ಬಿಸಿರುವ ಕೊರೊನಾ ವೈರಸ್ ಇದೀಗ ಉಡುಪಿಯಲ್ಲಿ ಸದ್ದು ಮಾಡತೊಡಗಿದೆ. ಇಂದು ಇತ್ತೀಚೆಗೆ ಚೀನಕ್ಕೆ ತೆರಳಿ 15 ದಿನಗಳ ಹಿಂದೆ ಸ್ವದೇಶಕ್ಕೆ ಮರಳಿದ ಜಿಲ್ಲೆಯ ಒಟ್ಟು ನಾಲ್ಕು ಮಂದಿಯನ್ನು ಸಂಶಯಾಸ್ಪದ ಕೊರೊನಾ ವೈರಸ್‌ಗೆ ಪರೀಕ್ಷೆಗೊಳಪಡಿಸಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರಲ್ಲಿ ಒಬ್ಬರು ಕಾಪು ತಾಲೂಕಿನವರಾಗಿದ್ದು 15 ದಿನಗಳ ಹಿಂದೆ ಚೀನಾದಿಂದ ಮರಳಿ ಬಂದಿದ್ದರು. ಅವರು ಶೀತ ಹಾಗೂ ಗಂಟಲು ಸೋಂಕಿ ಗಾಗಿ ಚಿಕಿತ್ಸೆಗೆ ಬಂದಿದ್ದರೆ, ಮತ್ತೆ ಮೂವರು -ಗಂಡ, ಹೆಂಡತಿ, ಮಗು- ಬ್ರಹ್ಮಾವರ ತಾಲೂಕಿನವರಾಗಿದ್ದು ಇವರು ಸಹ ಎರಡು ವಾರಗಳ ಹಿಂದೆ ಚೀನದಿಂದ ಮರಳಿದ್ದರು.
ಇವರಲ್ಲಿ ಗಂಡನಲ್ಲಿ ಶೀತ-ಕೆಮ್ಮು ಇದ್ದರೆ, ಮಗುವಿನಲ್ಲಿ ಸಹ ಲಘು ಶೀತವಿದೆ. ಆದರೆ ಹೆಂಡತಿ ಆರೋಗ್ಯವಂತರಾಗಿದ್ದಾರೆ. ಇದೀಗ ಈ ನಾಲ್ವರನ್ನು ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ರಕ್ತ ಹಾಗೂ ಗಂಟಲಿನ ದ್ರವವನ್ನು ಕೊರೊನಾ ವೈರಸ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ನಂಬಲರ್ಹ ಮೂಲಗಳು ‘ವಾರ್ತಾಭಾರತಿ’ಗೆ ತಿಳಿಸಿದೆ.
ಇದು ಸಾಮಾನ್ಯ ಶೀತ ಕೆಮ್ಮು ಆಗಿದ್ದು, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸತತವಾಗಿ ನಡೆಸಿದ ಪ್ರಯತ್ನ ಫಲಪ್ರದವಾಗಿಲ್ಲ.
ಕೆಎಂಸಿ ಸ್ಪಷ್ಟನೆ
ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟ ಪಡಿಸಿದ್ದಾರೆ.
ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಇದುವರೆಗೆ ಯಾವುದೇ ರೋಗಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







