ಫೆ.8ರಿಂದ ಉಡುಪಿ ಜಿಲ್ಲೆಯಲ್ಲಿ ಕೃಷಿ ಸಾಲ ಅಭಿಯಾನ: ಜಿ.ಜಗದೀಶ್
ಉಡುಪಿ, ಫೆ.7: ಜಿಲ್ಲೆಯಲ್ಲಿ ಕೃಷಿ ಉದ್ದೇಶಕ್ಕಾಗಿ ರೈತರಿಗೆ ಕೃಷಿ ಸಾಲ ನೀಡಲು ಫೆ.8ರಿಂದ 24 ರವರೆಗೆ ಕೃಷಿ ಸಾಲ ಅಭಿಯಾನವನ್ನು ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ, ಗ್ರಾಮೀಣ, ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಯಡಿಯಲ್ಲಿ ರೈತರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದು, ದೇಶದಾದ್ಯಂತ 9.22 ಕೋಟಿ ರೈತರು ಈ ಯೋಜನೆಯಲ್ಲಿ ನೊಂದಾವಣೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1,34,217 ರೈತರು ಈ ಯೋಜನೆ ಯಡಿ ನೊಂದಾವಣಿಗೊಂಡು ಇದರ ಪ್ರಯೋಜನ ಪಡೆಯುತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೊಂದಾವಣೆಯಾಗಿರುವ ರೈತರಲ್ಲಿ ಕೇವಲ 30,940 ರೈತರು ಮಾತ್ರ ಬೆಳೆಸಾಲ ಯೋಜನೆಯ ಪ್ರಯೋಜನ ಪಡೆದಿದ್ದು, ಉಳಿದಂತೆ 1,03,277 ರೈತರು ಬೆಳೆ ಸಾಲ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದವರು ವಿವರಿಸಿದರು.
ಈ ರೈತರು ಬೆಳೆಸಾಲ ಪಡೆಯಲು ಅರ್ಹರಾಗಿದ್ದರೂ ಸಹ ಇದುವರೆಗೊ ಬೆಳೆಸಾಲ ಪಡೆಯದೇ ಇರುವುದರಿಂದ, ಈ ರೈತರ ಅಗತ್ಯತೆಯನ್ನು ಮನಗಂಡು ಫೆ.8 ರಿಂದ 24ರವರೆಗೆ ಕೃಷಿ ಸಾಲ ಅಭಿಯಾನವನ್ನು ಜಿಲ್ಲೆ ಯಾದ್ಯಂತ ಎಲ್ಲಾ ಬ್ಯಾಂಕ್‌ಗಳಲ್ಲಿ ಆಯೋಜಿಸಲಾಗಿದೆ. ರೈತರು ಈ ಯೋಜನೆ ಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಕೃಷಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಯಾವುದೇ ವಿಳಂಬ ಮಾಡದೇ ಶೀಘ್ರದಲ್ಲಿ ಸಾಲ ಮಂಜೂರು ಮಾಡುವಂತೆ ಈಗಾಗಲೇ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಬ್ಯಾಂಕರ್‌ಗಳ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದ ಜಗದೀಶ್, ಕೃಷಿ ಸಾಲ ಪಡೆಯುವಲ್ಲಿ ರೈತರಿಗೆ ಸಮಸ್ಯೆಗಳಾದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರುದ್ರೇಶ್ (ದೂರವಾಣಿ: 9449860858) ಅಥವಾ ಹಾಗೂ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯ್ಕಾ (ದೂರವಾಣಿ:8277932501) ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಲೀಡ್‌ಬ್ಯಾಂಕ್ ಮೆನೇಜರ್ ರುದ್ರೇಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರ ಶೇಖರ್ ನಾಯ್ಕಾ ಉಪಸ್ಥಿತರಿದ್ದರು.







