ಯಕ್ಷಗಾನ ಅಭಿವೃದ್ಧಿ, ತರಬೇತಿ, ಸಂಶೋಧನಾ ಕೇಂದ್ರಕ್ಕೆ ಶಿಲಾನ್ಯಾಸ

ಉಡುಪಿ, ಫೆ.7: ಯಕ್ಷಗಾನ ಉಳಿವಿಗಾಗಿ ಶ್ರಮಿಸುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಮುಂದಿನ 100ವರ್ಷಗಳಿಗೆ ಬೇಕಾದ ಕಲಾವಿದರನ್ನು ತಯಾರು ಮಾಡಿದೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಕುಂಜಿಬೆಟ್ಟು- ಬೀಡಿನ ಗುಡ್ಡೆಯ ರಸ್ತೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಯಕ್ಷಗಾನ ಅಭಿವೃದ್ಧಿ, ತರಬೇತಿ, ಸಂಶೋಧನಾ ಕೇಂದ್ರ’ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ನಾವೇ ಕೆಟ್ಟು ಹೋಗುತ್ತಿದ್ದೇವೆ ಹೊರತು ಕಾಲ ಕೆಟ್ಟು ಹೋಗುವುದಲ್ಲ. ನಾವು ಸರಿಯಾಗಿದ್ದರೆ ದೇಶ ಹಾಗೂ ಕಾಲ ಕೂಡ ಸರಿಯಾಗಿರುತ್ತದೆ. ಸಮಾಜದ ವಿಶ್ವಾಸಾರ್ಹತೆ ಗಳಿಸಿ ಉಳಿಸಿಕೊಂಡರೆ ಸಮಾಜದಿಂದ ಸಾಕಷ್ಟು ನೆರವು ಹರಿದು ಬರುತ್ತದೆ. ಇದಕ್ಕೆಲ್ಲ ಯಕ್ಷಗಾನ ಕಲಾರಂಗವೇ ಸಾಕ್ಷಿಯಾಗಿದೆ ಎಂದರು.
ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರರ್ತಕ ಡಾ.ಜಿ.ಶಂಕರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್, ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್, ಉದ್ಯಮಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಪೀಠ ಸ್ಥಾಪನೆ
ಉಡುಪಿ ಯಕ್ಷಗಾನ ಕೇಂದ್ರವನ್ನು ಮುನ್ನಡೆಸುವ ಮೂಲಕ ಮಣಿಪಾಲ ಮಾಹೆ ಯಕ್ಷಗಾನವನ್ನು ಉಳಿಸುವ ಕಾರ್ಯ ಮಾಡುತ್ತಿದೆ. ಕೇಂದ್ರದ ಸುವರ್ಣ ಮಹೋತ್ಸವದ ಪ್ರಯುಕ್ತ ಮಾಹೆಯಲ್ಲಿ ಶೀಘ್ರವೇ ಯಕ್ಷಗಾನ ಪೀಠವನ್ನು ಸ್ಥಾಪಿಸಲಾಗುವುದು ಎಂದು ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ. ಎಚ್.ಎಸ್.ಬಲ್ಲಾಳ್ ತಿಳಿಸಿದರು.







