ಫೆ.10ರಂದು ‘ನಾರಸಿಂಹ’ ನೃತ್ಯ ರೂಪಕ ಪ್ರದರ್ಶನ
ಉಡುಪಿ, ಫೆ.7: ಉಡುಪಿ ನೃತ್ಯನಿಕೇತನ ಕೊಡವೂರು ತಂಡವು ‘ನಾರ ಸಿಂಹ’ ಒಳಿತಿನ ವಿಜಯದ ಕಥನ ಎಂಬ ನೃತ್ಯ ರೂಪಕವನ್ನು ಫೆ.10ರಂದು ಸಂಜೆ 6:30ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರಸ್ತುತ ಪಡಿಸಲಿದೆ ಎಂದು ಸಂಸ್ಥೆಯ ನಿರ್ದೇಶಕ ವಿದ್ವಾನ್ ಸುಧೀರ್‌ರಾವ್ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಸಿಂಹ ಇದು ಪುರಾಣದ ಪ್ರಹ್ಲಾದನ ಕತೆಯಾಗಿದೆ. ಸಾಂಪ್ರದಾಯಿಕ ಕಥಾ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡದೆ ಅದರ ಪ್ರಸ್ತುತಿ ವಿಧಾನದಲ್ಲಿ, ಅಭಿವ್ಯಕ್ತಿಯ ವಿನ್ಯಾಸದಲ್ಲಿ, ಸಂಗೀತ ಸಂಯೋಜನೆಯಲ್ಲಿ ನಾಟಕ ರಂಗದ ಶಕ್ತಿಯನ್ನು ಮಿಳಿತಗೊಳಿಸಿ ಹೊಸತನವನ್ನು ತೋರಿಸಾಗಿದೆ ಎಂದರು.
ಈ ಪ್ರಯೋಗವನ್ನು ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ.ಮೋಹನ್ ಆಳ್ವ ಅನಾವರಣಗೊಳಿಸಲಿರುವರು. ಈ ನೃತ್ಯ ರೂಪಕ ವನ್ನು ರಂಗಕರ್ಮಿ ಡಾ.ಶ್ರೀಪಾದ್ ಭಟ್ ನಿರ್ದೇಶಿಸಿದ್ದು, ಸಾಹಿತಿ ಸುಧಾ ಆಡುಕಳ ಸಾಹಿತ್ಯ ರಚಿಸಿದ್ದಾರೆ. ವಿದುಷಿ ಮಾನಸಿ ಹಾಗೂ ವಿದುಷಿ ಅನಘಶ್ರೀ ನೃತ್ಯ ಸಂಯೋಜನೆ ಮಾಡಿದ್ದಾರೆ. ರಾಜು ಮಣಿಪಾಲ, ಪ್ರಶಾಂತ್ ಉದ್ಯಾವರ ರಂಗ ಸಜ್ಜಿಕೆ ನಿರ್ವಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಡಾ.ಶ್ರೀಪಾದ ಭಟ್, ವಿದುಷಿ ಮಾನಸಿ ಸುಧೀರ್, ಶಾರದಾ ಉಪಾಧ್ಯಾಯ ಉಪಸ್ಥಿತರಿದ್ದರು.







