ಫೆ.14-15ರಂದು ‘ಕರ್ಮಸಿದ್ಧಿ’ ಅಂತಾರಾಷ್ಟ್ರೀಯ ಸಮ್ಮೇಳನ
ಉಡುಪಿ, ಫೆ.7: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ಮತ್ತು ಜಾನಪದ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಶ್ರೀಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅವರ ಜನ್ಮದಿನದ ಸ್ಮರಣಾರ್ಥ ‘ಕರ್ಮಸಿದ್ಧಿ-2020’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಫೆ.14 ಮತ್ತು 15ರಂದು ಕಾಲೇಜಿನ ಭಾವಪ್ರಕಾಶ ಸಭಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನವನ್ನು ಫೆ.14ರಂದು ಬೆಳಗ್ಗೆ 9ಗಂಟೆಗೆ ಭಾರತ ಸರಕಾರದ ಆಯುಷ್ ವಿಭಾಗದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಉದ್ಘಾಟಿಸ ಲಿದ್ದು, ಅಧ್ಯಕ್ಷತೆಯನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಲಿ ರುವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಪ್ರೊ.ಬಿ.ಯಶೋವರ್ಮ ಭಾಗವಹಿಸಲಿರುವರು ಎಂದು ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ನಿರಂಜನ್ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ 14 ಮಂದಿ ತಜ್ಞರು ಪಾರಂಪರಿಕ ಹಾಗೂ ಆಧುನಿಕ ಪಂಚಕರ್ಮ ಪದ್ಧತಿಗಳ ಬಗ್ಗೆ ಉಪನ್ಯಾಸ ನೀಡಲಿರುವರು. ಸುಮಾರು 200 ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧವನ್ನು ಮಂಡಿಸಲಿರುವರು. ದೇಶ ವಿದೇಶಗಳ ಒಟ್ಟು 1000 ಪ್ರತಿನಿಧಿಗಳು ಭಾಗವಹಿಸಲಿರು ವರು. ಅಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಿಗೆ ಮೊಬೈಲ್ ಫೋಟೋಗ್ರಫಿ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಫೆ.15ರಂದು 4ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಆಯುಷ್ ವಿಭಾಗದ ಆಯುಕ್ತೆ ಮೀನಾಕ್ಷಿ ನೇಗಿ, ಭಾರತೀಯ ವೈದ್ಯಕೀಯ ಕೇಂದ್ರ ಪರಿಷತ್‌ನ ಉಪಾಧ್ಯಕ್ಷ ಡಾ.ಬಿ.ಆರ್.ರಾಮಕೃಷ್ಣ ಭಾಗವಹಿಸಲಿರು ವರು. ಫೆ.13ರಂದು ಬೆಳಗ್ಗೆ 6:30ಕ್ಕೆ ರನ್ ಫಾರ್ ಬಯೋಫ್ಯುರಿಫಿಕೇಶನ್ ಓಟವನ್ನು ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಲಹೆಗಾರ ಡಾ.ನಾಗರಾಜ್ ಎಸ್., ಸಂಘಟನಾ ಕಾರ್ಯದರ್ಶಿಗಳಾದ ಡಾ.ಚೈತ್ರಾ ಹೆಬ್ಬಾರ್, ಡಾ.ಶ್ರೀಕಾಂತ್ ಪಿ.ಎಚ್., ಡಾ. ರವಿ ಭಟ್, ಡಾ.ನಿತೀನ್ ಉಪಸ್ಥಿತರಿದ್ದರು.







