ಸ್ವಯಂಕೃತ ಅಪರಾಧದಿಂದಲೇ ಬಿಜೆಪಿ ಸರಕಾರ ಪತನವಾಗುತ್ತದೆ: ಸಿದ್ದರಾಮಯ್ಯ

ಕಲಬುರ್ಗಿ, ಫೆ.7: ರಾಜ್ಯದಲ್ಲಿ ನೆರೆ ಹಾವಳಿಯಿಂದ ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದರೂ, ಕೇಂದ್ರ ಸರಕಾರದ ಬಳಿ ಹೋಗಿ ಸೂಕ್ತ ಪರಿಹಾರ ಕೇಳುವ ಧೈರ್ಯವನ್ನು ತೋರದ ಯಡಿಯೂರಪ್ಪ, ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಕೇಂದ್ರ ಸರಕಾರದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ನಾಲ್ಕು ಜನ ಸಚಿವರಿದ್ದಾರೆ. ಆದರೂ, ನೆರೆ ಹಾವಳಿಗೆ ಸೂಕ್ತ ಪರಿಹಾರ ತರಲು ಇವರಿಂದ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಮುಂದಿನ ತಿಂಗಳು ಬಜೆಟ್ ಮಂಡಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ತೆರಿಗೆ ಸಂಗ್ರಹವೇ ಸಮರ್ಪಕವಾಗಿ ಆಗಿಲ್ಲ. ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಬರಬೇಕಿರುವ ಸಾವಿರಾರು ಕೋಟಿ ರೂ.ಪಾಲು ಇನ್ನೂ ಬಂದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಶಾಸಕರಿಗೆ ಕೊಡಬೇಕಿರುವ ಅನುದಾನವನ್ನೆ ಕೊಡಲು ಯಡಿಯೂರಪ್ಪಗೆ ಸಾಧ್ಯವಾಗುತ್ತಿಲ್ಲ. ಕೇವಲ ಒಂದು ಕಂತನ್ನು ಮಾತ್ರ ಬಿಡುಗಡೆ ಮಾಡಿದ್ದು, ಉಳಿದ ಮೂರು ಕಂತುಗಳ ಪತ್ತೆಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಾವ ರೀತಿಯಲ್ಲಿ ಬಜೆಟ್ ಮಂಡಿಸುತ್ತಾರೆ ಅನ್ನೋದೆ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.
ಪಕ್ಷಾಂತರಿಗಳು ಎಂದಿಗೂ ನಮ್ಮ ಸೇಹಿತರಾಗಲು ಸಾಧ್ಯವಿಲ್ಲ. ಅವರೆಲ್ಲ ನಮ್ಮ ಸ್ನೇಹಿತರಾಗಿದ್ದರೆ ಪಕ್ಷವನ್ನು ಬಿಟ್ಟು ಹೋಗುತ್ತಿರಲಿಲ್ಲ. ಆತ್ಮೀಯರಂತೆ ನಾಟಕವಾಡುತ್ತಿದ್ದವರ ನಿಜಬಣ್ಣ ಬಯಲಾಗಿದೆ. ಸಚಿವರಾದ ಕಾರಣಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆಯೇ ಹೊರತು, ಬೇರೆ ಯಾವುದೇ ವಿಶೇಷತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಮೂಲ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಅದು ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ. ಸ್ವಯಂಕೃತ ಅಪರಾಧದಿಂದಲೇ ಬಿಜೆಪಿ ಸರಕಾರ ಪತನವಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಬಗ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕಾದಲ್ಲಿ ಜನರು ಆಶೀರ್ವಾದ ಮಾಡಬೇಕಲ್ಲವೇ ಎಂದು ಹೇಳಿದ್ದೇನೆ. ಅವರೇ ಅಲ್ಲ, ಯಾರೇ ಮುಖ್ಯಮಂತ್ರಿಯಾಗಬೇಕಾದರೂ ಜನರ ಆಶೀರ್ವಾದ ಇರಲೇಬೇಕು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 80 ಸ್ಥಾನಗಳಿಗೆ ಇಳಿಯಿತು ಎಂದು ಕುಮಾರಸ್ವಾಮಿ ಹೇಳಿದ್ದರು. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದರೂ, ಆನಂತರ ನಡೆದ ಚುನಾವಣೆಯಲ್ಲಿ ಅವರು ಎಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ನಾನೇಕೆ ಸರ್ಟಿಫಿಕೇಟ್ ಕೊಡಲಿ ಎಂದರು.







