ದರಿದ್ರ ಸ್ಥಿತಿಯಲ್ಲಿ ರಾಜ್ಯದ ಸಾಹಿತ್ಯ ಲೋಕ: ಡಾ.ಮಹಾಬಲೇಶ್ವರ ರಾವ್
ಮುರಾರಿ-ಕೆದ್ಲಾಯ ರಂಗೋತ್ಸವದಲ್ಲಿ ಕಸಾಪ, ನಾಟಕ ಅಕಾಡೆಮಿ ವಿರುದ್ಧ ಆಕ್ರೋಶ

ಉಡುಪಿ, ಫೆ.7: ಶೃಂಗೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಡೆದ ದಾಂಧಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಹಿಂಪಡೆದಿರುವುದನ್ನು ವಿರೋಧಿಸಿ ಕನ್ನಡ ಸಾಹಿತ್ಯ ಪರಿಷತ್ ಆಗಲಿ ಅಥವಾ ಯಾವುದೇ ಕಲಾ ಸಂಘಟನೆಗಳು ಆಗಲಿ ಗಟ್ಟಿ ಧ್ವನಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿಲ್ಲ. ಕರ್ನಾಟಕದಲ್ಲಿ ಸಾಂಸ್ಕೃತಿಕ ಹಾಗೂ ಸಾಹ್ಯಿತಿಕ ಲೋಕ ಇಷ್ಟು ದರಿದ್ರ ಸ್ಥಿತಿಯಲ್ಲಿ ಯಾವತ್ತೂ ಇರಲಿಲ್ಲ ಎಂದು ಉಡುಪಿ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿ ಕಾರಿ ಹಾಗೂ ಲೇಖಕ ಡಾ.ಮಹಾಬಲೇಶ್ವರ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಡಾ.ನಿ.ಮುರಾರಿ ಬಲ್ಲಾಳ್ ಹಾಗೂ ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ ಮುರಾರಿ -ಕೆದ್ಲಾಯ ರಂಗೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಾಟಕ ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿ ವಿಜೇತರ ಪಟ್ಟಿಯನ್ನು, ನಂತರ ಬಂದ ಸರಕಾರ ಹಿಂಪಡೆದು ಬೇರೆಯೇ ಹೆಸರು ಪ್ರಕಟಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲೆಯ ಯಾವುದೇ ನಾಟಕ ತಂಡ, ಕಲಾವಿದರು ಗಟ್ಟಿ ಧ್ವನಿಯಲ್ಲಿ ಪ್ರತಿಭಟನೆ ಮಾಡಿಲ್ಲ. ಅಕಾಡೆಮಿಯ ನಿರಂಕುಶ, ಅಪ್ರಜಾಸತಾತ್ಮಕ ಹಾಗೂ ಕಲಾವಿದರನ್ನು ಅವಮಾನ ಮಾಡುವ ಧೋರಣೆಯನ್ನು ಖಂಡಿಸುವ ಪ್ರತಿಭಟನೆ ಯಾಗಲಿ ವಿಚಾ ಸಂಕಿರಣವಾಗಲಿ ನಡೆದಿಲ್ಲ ಎಂದರು.
ಶೃಂಗೇರಿಯಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ತಮ್ಮ ರಾಜಕೀಯ ಧೋರಣೆಗೆ ವಿರುದ್ಧವಾಗಿದ್ದರೆ ಎಂಬ ಕಾರಣಕ್ಕೆ ನಕ್ಸಲ್ ಹಣೆಪಟ್ಟಿ ಕಟ್ಟಿ, ಅನುದಾನ ನಿಲ್ಲಿಸಿದರು. ಅಲ್ಲದೆ ಪೊಲೀಸರ ಸರ್ಪಗಾವಲಿನಲ್ಲಿ ದಾಂಧಲೆ ಸೃಷ್ಟಿಸಿ ಎರಡು ದಿನಗಳ ಗೋಷ್ಠಿಯನ್ನು ಒಂದು ದಿನಕ್ಕೆ ಈ ಸರಾಕರ ಮೊಟಕು ಗೊಳಿಸಿದೆ. ಆದರೂ ರಾಜ್ಯದಲ್ಲಿ ಹೋಬಳಿ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಇರುವ ಕಸಾಪ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇದರ ವಿರುದ್ಧ ಮಾತನಾಡಿಲ್ಲ ಎಂದು ಅವರು ದೂರಿದರು.
ಅಲ್ಲದೆ ಕಲ್ಬುರ್ಗಿಯಲ್ಲಿ ನಡೆದ ಸಮ್ಮೇಳನಾಧ್ಯಕ್ಷರು ಕೂಡ ಶೃಂಗೇರಿಯ ಬಗ್ಗೆ ಎಲ್ಲೂ ಒಂದೇ ಒಂದು ಮಾತನಾಡಿಲ್ಲ ಮತ್ತು ಪ್ರತಿಭಟನೆಯನ್ನು ಕೂಡ ವ್ಯಕ್ತಪಡಿಸಿರಲಿಲ್ಲ. ನಾವು ಇಂದು ಯಾವ ಮಾತನಾಡಿದರೆ ಲಾಭ ಆಗುತ್ತೆ, ಯಾವ ಮಾತು ಆಡಿದರೆ ನಮಗೆ ನಷ್ಟ ಆಗುತ್ತೆ ಎಂಬ ಲೆಕ್ಕಚಾರ ಮನುಷ್ಯರಾಗಿ ದ್ದೇವೆ ಎಂದು ಅವರು ಕಟುವಾಗಿ ಟೀಕಿಸಿದರು.
ಇಂದಿನ ಸಾಂಸ್ಕೃತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆದ್ಲಾಯ ಮತ್ತು ಮುರಾರಿ ಬಲ್ಲಾಳ್ ತುಂಬಾ ಅವಶ್ಯಕ ಹಾಗೂ ಪ್ರಸ್ತುತ ಎಂದು ಆಗುತ್ತಿದೆ. ಇವರಿಬ್ಬರು ಇಂದು ಬದುಕಿದ್ದರೆ ಇದನ್ನು ನೇರವಾಗಿ ಖಂಡಿಸುತ್ತಿದ್ದರು. ಪ್ರತಿಭಟನೆಯ ನೆಲೆಯಾಗಿ, ಜನತೆಯ ಅಂತರಂಗದ ಆತ್ಮಸಾಕ್ಷಿಯಾಗಿ ಇವರು ಅನನ್ಯರು ಹಾಗೂ ಉಡುಪಿಗೆ ಬೇಕಾಗಿದ್ದವರು. ಅವರಿಬ್ಬರು ಇವತ್ತಿಗೂ ಪ್ರಸ್ತುತರು ಎಂದು ಅವರು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ಮಾತನಾಡಿ, ನಾಟಕ, ಚಿತ್ರಕಲೆ, ಸಿನೆಮಾ ಕ್ಷೇತ್ರ ನಮ್ಮ ಬದುಕಿನ ಸೌಂದರ್ಯವನ್ನು ತೋರಿಸಲು ಇರುವ ಮಾಧ್ಯಮವಾಗಿದೆ. ಇಂದು ನಮ್ಮ ಬದುಕಿನ ಆ ಸೌಂದರ್ಯಗಳನ್ನು ನಾಶ ಮಾಡುವ ಕೆಲಸ ಕೆಲವು ಶಕ್ತಿಗಳು ಮಾಡುತ್ತಿವೆ. ಅದನ್ನು ಎದುರಿಸುವ ಶಕ್ತಿ ಬೇರೆ ಎಲ್ಲ ಮಾಧ್ಯಮಗಳಿಗಿಂತಲೂ ಹೆ್ಚು ರಂಗಭೂಮಿಗೆ ಇದೆ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಸಂತೋಷ್ ಬಲ್ಲಾಳ್, ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು.
ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೆಂಗಳೂರಿನ ರಂಗರಥ ತಂಡದಿಂದ ಮಾಳವಿಕಾಗ್ನಿವಿುತ್ರ ನಾಟಕ ಪ್ರದರ್ಶನ ಗೊಂಡಿತು.







